ಗಾಂಧಿ ಜಯಂತಿ ಪ್ರಯುಕ್ತ ದೇಶಭಕ್ತಿ ಗೀತೆ ಸ್ಪರ್ಧೆ : ಸ್ಮಾರಕ ನಿರ್ಮಾಣಕ್ಕೆ ಸರ್ವೋದಯ ಸಮಿತಿಯಿಂದ ಯೋಜನೆ

ಮಡಿಕೇರಿ ಸೆ.21 : ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳ ಕುರಿತು ಯುವ ಸಮೂಹಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅ.2ರಂದು ಕೊಡಗು ಜಿಲ್ಲಾ ಸರ್ವೋದಯ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯನ್ನು ನಗರದ ಗಾಂಧಿ ಮಂಟಪದಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ವೋದಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಅವರು, ಸರ್ವೋದಯ ಸಮಿತಿ ಈ ಹಿಂದಿನ ವರ್ಷಗಳಲ್ಲಿ ಗಾಂಧಿ ಜಯಂತಿಯ ಸಂದರ್ಭ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ. ಆದರೆ, ಕೊರೊನಾ ಹಾಗೂ ಮಳೆಯ ಕಾರಣದಿಂದ ಈ ಬಾರಿ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಮಾತ್ರ ಆಯೋಜಿಸಲಾಗಿದೆ ಎಂದರು.
ಅಂದು ಬೆಳಗ್ಗೆ 9.30 ಗಂಟೆಗೆ ನಗರದ ಗಾಂಧಿ ಮಂಟಪದ ಮುಂಭಾಗ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮಳೆ ಹೆಚ್ಚಾದಲ್ಲಿ ಸಂತಮೈಕೆÀಲರ ಶಾಲಾ ಸಭಾಂಗಣದಲ್ಲಿ ಸ್ಪರ್ಧೆಯನ್ನು ನಡೆಸÀಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ದೇಶ ಭಕ್ತಿಗೀತೆಯನ್ನು ಹಾಡಲು 7 ನಿಮಿಷದ ಕಾಲಾವಕಾಶ ನೀಡಲಾಗುತ್ತದೆ. ಕರೋಕೆ ಮೂಲಕ ಹಾಡಲು, ಇತರೆ ವಾದ್ಯ ಸಂಗೀತ ಬಳಸಲು ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸುವವರು ಸೆ.28ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಅಂಬೆಕಲ್ ನವೀನ್ ಮೊ.9448005642, ಎಸ್.ಐ.ಮುನೀರ್ ಅಹಮ್ಮದ್ ಮೊ.9886181613, ಕೆ.ಟಿ.ಬೇಬಿ ಮ್ಯಾಥ್ಯು ಮೊ.9448060466, ಕೋಡಿ ಚಂದ್ರಶೇಖರ್ ಮೊ.9448588050 ಸಂಪರ್ಕಿಸುವಂತೆ ತಿಳಿಸಿದರು.
ಭವ್ಯ ಗಾಂಧಿ ಸ್ಮಾರಕ ಭವನಕ್ಕೆ ಚಿಂತನೆ- ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಮಡಿಕೇರಿಗೆ ಭೇಟಿ ನೀಡಿ, ಭಾಷಣ ಮಾಡಿದ್ದ ಐತಿಹಾಸಿಕ ಹಿನ್ನೆಲೆಯ ಗಾಂಧಿ ಮಂಟಪವಿರುವ ಸ್ಥಳದ 50 ಸೆಂಟ್ ಜಾಗದಲ್ಲಿ ಭವ್ಯವಾದ ‘ಗಾಂಧಿ ಸ್ಮಾರಕ ಭವನ’ ನಿರ್ಮಾಣಕ್ಕೆ ಸರ್ವೋದಯ ಸಮಿತಿ ಆಸಕ್ತವಾಗಿದ್ದು, ಪ್ರಯತ್ನ ನಡೆಸಿರುವುದಾಗ ಮುನೀರ್ ಅಹಮ್ಮದ್ ತಿಳಿಸಿದರು.
ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವಿರುವ ಬೆರಳೆಣಿಕೆಯ ಪ್ರದೇಶಗಳಲ್ಲಿ ಮಡಿಕೇರಿಯೂ ಒಂದಾಗಿದ್ದು, ಕೊಳ್ಳಿಮಾಡ ಕರುಂಬಯ್ಯ ಅವರು ಮಹಾತ್ಮರ ಚಿತಾ ಭಸ್ಮವನ್ನು ಮಡಿಕೇರಿಗೆ ತಂದ ಇತಿಹಾಸವಿದೆ. ಈ ಹಿಂದಿನ ಪ್ರಬಾರ ಜಿಲ್ಲಾಧಿಕಾರಿ ಬಲದೇವಕೃಷ್ಣ ಅವರು, ಗಾಂಧಿ ಸ್ಮಾರಕ ನಿರ್ಮಾಣಕ್ಕೆ ಆ ದಿನಗಳಲ್ಲೆ ಸುಮಾರು 1.32 ಕೋಟಿ ವೆಚ್ಚದ ನೀಲ ನಕಾಶೆಯನ್ನು ಸಿದ್ಧಪಡಿಸಿದ್ದರು. ಇಂದು ಉದ್ದೇಶಿತ ಭವನ ನಿರ್ಮಾಣಕ್ಕೆ 2 ಕೋಟಿಗೂ ಹೆಚ್ಚಿನ ವೆಚ್ಚ ತಗಲುವ ಸಾಧ್ಯತೆಗಳಿದೆ ಎಂದು ಮುನೀರ್ ಹೇಳಿದರು.
ಸ್ಮಾರಕ ನಿರ್ಮಾಣದ ಬಗ್ಗೆ ಜಿಲ್ಲೆಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರುಗಳ ಗಮನ ಸೆಳೆಯಲಾಗಿದ್ದು, ಸರ್ಕಾರದಿಂದ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಸಂಸದರನ್ನು ಸಮಿತಿ ಭೇಟಿ ಮಾಡಲಿದೆ ಎಂದು ತಿಳಿಸಿದರು.
ಸಮಿತಿಯ ಕಾರ್ಯದರ್ಶಿ ಕೆ.ಟಿ.ಬೇಬಿಮ್ಯಾಥ್ಯು ಅವರು ಮಾತನಾಡಿ, ಉದ್ದೇಶಿತ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ನೆರವನ್ನು ಸರಕಾರದ ಮೂಲಕ ದೊರಕಿಸುವ ವಿಶ್ವಾಸವನ್ನು ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರು ವ್ಯಕ್ತಪಡಿಸಿದ್ದಾರೆ. ಉದ್ದೇಶಿತ ಸ್ಮಾರಕದಲ್ಲಿ ಮಹಾತ್ಮಾ ಗಾಂಧೀಜಿಯ ಭವ್ಯ ಪ್ರತಿಮೆ ಹಾಗೂ ನಿತ್ಯವೂ ಬೆಳಗುವ ಜ್ಯೋತಿಯ ವ್ಯವಸ್ಥೆ ಮಾಡುವ ಚಿಂತನೆಗಳು ಸಮಿತಿಯ ಮುಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಉಪಾಧ್ಯಕ್ಷ ಟಿ.ಎನ್.ಮುದ್ದಯ್ಯ, ಖಜಾಂಚಿ ಕೋಡಿ ಚಂದ್ರಶೇಖರ್ ಹಾಗೂ ಸದಸ್ಯ ಅಂಬೇಕಲ್ ನವೀನ್ ಕುಶಾಲಪ್ಪ ಉಪಸ್ಥಿತರಿದ್ದರು.
