ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ವಿಶೇಷ ಗಮನಹರಿಸಲು ಡಿಸಿ ಸೂಚನೆ

September 23, 2020

ಮಡಿಕೇರಿ ಸೆ.23 : ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ವಿಶೇಷ ಗಮನ ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಬಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೂಲಿ ಕೆಲಸ ಮಾಡುತ್ತಿರುವ ಮಕ್ಕಳನ್ನು ಗುರುತಿಸಿ ರಕ್ಷಣೆ ಮಾಡುವುದು. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳ ಅಪಹರಣ, ಕಿರುಕುಳ ಮತ್ತಿತರ ಪ್ರಕರಣಗಳು ಕಂಡು ಬರದಂತೆ ಕಾಯ್ದೆ ಕಾನೂನು ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಕೂಲಿ ಕೆಲಸಕ್ಕೆ ಹೋಗುವ ಮಕ್ಕಳು ಕಂಡುಬಂದರೆ ತಕ್ಷಣವೆ ಮಹಿಳಾ ಸಹಾಯವಾಣಿ 181 ಮತ್ತು ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ದೂರು ನೀಡಬೇಕು. ದೂರು ಬಂದ ಪ್ರಕರಣಗಳಿಗೆ ತಕ್ಷಣವೇ ಅಧಿಕಾರಿಗಳು ಸ್ಪಂದಿಸಬೇಕು ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಬೇಕು. ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಇತರ ಇಲಾಖೆಗಳು ಸಹಕಾರ ನೀಡಬೇಕು. ಬಾಲ ಕಾರ್ಮಿಕರು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು.
ಮನೆಯಂಗಳದಲ್ಲಿ ಅಂಗನವಾಡಿ ಕಾರ್ಯುಕ್ರಮ, ಪೋಷಣ್ ಅಭಿಯಾನ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿದಲ್ಲಿ ತಕ್ಷಣವೇ ಅಗತ್ಯ ಕ್ರಮ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಬೇಕು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು. ಈ ಸಂಬಂಧ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ ಅವರು ಜಿಲ್ಲೆಯಲ್ಲಿ ಪೋಕ್ಸೋ ಸಂಬಂಧಿಸಿದಂತೆ 35 ಪ್ರಕರಣಗಳು, 07 ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ, 02 ಮಕ್ಕಳ ಅಪಹರಣ, 06 ಮಹಿಳೆಯರ ಮೇಲಿನ ಅತ್ಯಾಚಾರ, 01 ಮಹಿಳೆಯರ ಮೇಲಿನ ಕಿರುಕುಳ, 04 ಕೌಟುಂಬಿಕ ದೌರ್ಜನ್ಯ, ಇತರೆ 6 ಪ್ರಕರಣಗಳು ಸೇರಿದಂತೆ ಒಟ್ಟು 61 ಪ್ರಕರಣಗಳು ‘ ಸಖಿ’ ಒನ್ ಸ್ಟಾಪ್ ಸೆಂಟರ್‍ಗೆ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಪರಶುರಾಮ್ ಅವರು ಮಾತನಾಡಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಸೂರಜ್ ಅವರು ಕೂಲಿ ಕೆಲಸಕ್ಕೆ ಹೋಗುವ ಮಕ್ಕಳು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಲಾಗುತ್ತದೆ. ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ವಿಶೇಷ ಒತ್ತು ನೀಡಲಾಗಿದೆ ಎಂದರು.
ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರಾದ ಲತೀಫ್, ಚೈಲ್ಡ್ ಲೈನ್ ಸಮಾಲೋಚಕರಾದ ನವೀನ್, ಸಖಿ ವಿಭಾಗದ ಆಡಳಿತಾಧಿಕಾರಿ ಪ್ರಭಾವತಿ ಅವರು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಆರ್.ವಿದ್ಯಾಧರ ಅವರು ಮಾತನಾಡಿ ಪೋಕ್ಸೋ ಪ್ರಕರಣಗಳನ್ನು ಆರಂಭದಲ್ಲಿಯೇ ನ್ಯಾಯಾಲಯಕ್ಕೆ ದಾಖಲಾಗಬೇಕು. 18 ವರ್ಷ ತುಂಬುತ್ತಿರುವಾಗ ದಾಖಲಾಗುತ್ತಿರುವುದು ಕಂಡು ಬರುತ್ತದೆ ಎಂದು ಅವರು ತಿಳಿಸಿದರು.
ಜಿ.ಪಂ. ಸಿಇಒ ಭನ್ವರ್ ಸಿಂಗ್ ಮೀನಾ ಅವರು ಮಾತನಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹಲವು ಮಾಹಿತಿ ಪಡೆದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರವೀಂದ್ರ ಅವರು ಹಲವು ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತ್ರೈಮಾಸಿಕ ಪ್ರಗತಿ ಪರಿಶೀಲನೆ, ಸಖಿ ಒನ್ ಸ್ಟಾಪ್ ಸೆಂಟರ್ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ನಿಯಮ 2006 ರಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ, ಜಿಲ್ಲಾ ಮಟ್ಟದ ಮಹಿಳಾ ಶಕ್ತಿ ಕೇಂದ್ರ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆ, ಹಾಗೂ ಜಿಲ್ಲಾ ಮಟ್ಟದ ಐಸಿಡಿಎಸ್ ಮೇಲ್ವಿಚಾರಣಾ ಮತ್ತು ಪರಿಶೀಲನಾ ಸಮಿತಿ ಸಭೆ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಕಾರ್ಯಪ್ಪ, ಜಿ.ಪಂ.ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಚ್ಚಾಡೋ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ್, ಪೊಲೀಸ್ ಇಲಾಖೆಯ ಸುಮಿತ್ರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಡಾ.ಗೋಪಿನಾಥ್, ಜಿಲ್ಲಾ ವಿಕಲಚೇತನ ಅಧಿಕಾರಿ ಸಂಪತ್ ಕುಮಾರ್, ಕಾನೂನು ಸಲಹೆಗಾರರಾದ ರೀಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಘಟಕದ ಕಾನೂನು ಸಲಹೆಗಾರರಾದ ದಿವ್ಯ, ಇತರರು ಹಾಜರಿದ್ದರು.