ಸಿಎಂ ಬಿಎಸ್‍ವೈ ರಾಜೀನಾಮೆಗೆ ಒತ್ತಾಯ

ಬೆಂಗಳೂರು ಸೆ.24 : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಕ್ಕಳು ಮತ್ತು ಮೊಮ್ಮಕ್ಕಳು ಅಕ್ರಮಹಣ ವರ್ಗಾವಣೆಯಲ್ಲಿ ತೊಡಗಿದ್ದು, ಈ ಕುರಿತು ತಮ್ಮ ಬಳಿ ಸಾಕ್ಷ್ಯ ದಾಖಲೆಗಳಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲಾ ಅವರು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲಾ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅವರ ಕುಟುಂಬದ ಸದಸ್ಯರು ಬಿಡಿಎ ನಲ್ಲಿ 666 ಕೋಟಿ ರೂ.ಗಳ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ, ಗುತ್ತಿಗೆದಾರರಿಂದ ಲಂಚ ಸ್ವೀಕರಿಸಿದ್ದು, ಆರ್ ಟಿಜಿಎಸ್ ಮೂಲಕ ಕೊಲ್ಕತ್ತಾ, ಬೆಂಗಳೂರಿನ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಯಡಿಯೂರಪ್ಪ ಪುತ್ರ, ಮೊಮ್ಮಗ ಭಾಗಿಯಾಗಿದ್ದಾರೆ. ಇದು ಕೇವಲ ಆರೋಪವಲ್ಲ, ಸತ್ಯ. ಇದರ ಸಂಪೂರ್ಣ ದಾಖಲೆಗಳು ತಮ್ಮ ಬಳಿಯಿವೆ ಎಂದರು.
ಯಡಿಯೂರಪ್ಪ ಒಂದು ಸೆಕೆಂಡ್ ವ್ಯರ್ಥಮಾಡದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಮುಖ್ಯಮಂತ್ರಿ ಕುರ್ಚಿಯಿಂದ ಯಡಿಯೂರಪ್ಪ ಕೆಳಗಿಳಿಯಬೇಕು ಎಂದು ಸುರ್ಜೇವಾಲಾ ಆಗ್ರಹಿಸಿದರು.
