ಕೊಡಗಿನಲ್ಲಿ ಒಂದೇ ದಿನ 3 ತಿಂಗಳ ಮಗು ಸೇರಿ 8 ಮಕ್ಕಳನ್ನು ಕಾಡಿದ ಕೋವಿಡ್

September 26, 2020

ಮಡಿಕೇರಿ ಸೆ.26 : ಕೊಡಗು ಜಿಲ್ಲೆಯಲ್ಲಿ ಒಂದೇ ದಿನ 3 ತಿಂಗಳ ಮಗು ಸೇರಿ 8 ಮಕ್ಕಳನ್ನು ಕೋವಿಡ್ ಕಾಡಿದೆ.
ವಿರಾಜಪೇಟೆ ನಾಲ್ಕೇರಿ ರಸ್ತೆಯ 3 ತಿಂಗಳ ಹೆಣ್ಣು ಮಗು, ವಿರಾಜಪೇಟೆ ಚಿಕ್ಕಪೇಟೆಯ ಜೂನಿಯರ್ ಕಾಲೇಜು ಸಮೀಪದ 5 ವರ್ಷದ ಬಾಲಕಿ, ಸೋಮವಾರಪೇಟೆ ಕಂಬಿಬಾಣೆ ಚಿಕ್ಲಿಹೊಳೆ ಜಲಾಶಯ ಸಮೀಪದ 6 ವರ್ಷದ ಬಾಲಕಿ, ಕುಶಾಲನಗರ ಗುಮ್ಮನಕೊಲ್ಲಿಯ 8 ವರ್ಷದ ಬಾಲಕಿ, ಮಡಿಕೇರಿ ಮಂಗಳಾದೇವಿ ನಗರದ 13 ಮತ್ತು 8 ವರ್ಷದ ಬಾಲಕರು ಸೋಮವಾರಪೇಟೆ ಚೆಟ್ಟಳ್ಳಿ ಕಂಡಕೆರೆ ಸಮೀಪದ 14 ವರ್ಷದ ಬಾಲಕ ಹಾಗೂ ಸಂಪಾಜೆ ದೇವರಕೊಲ್ಲಿಯ 11 ವರ್ಷದ ಬಾಲಕನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 26 ಮತ್ತು ಮಧ್ಯಾಹ್ನ 42 ಸೇರಿದಂತೆ ಒಟ್ಟು 68 ಮಂದಿಯಲ್ಲಿ ಕೋವಿಡ್ ಸೋಂಕು ಇರುವುದು ಖಾತ್ರಿಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಇಲ್ಲಿಯವರೆಗೆ ಒಟ್ಟು 2564 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 2069 ಮಂದಿ ಗುಣಮುಖರಾಗಿದ್ದಾರೆ. 462 ಸಕ್ರಿಯ ಪ್ರಕರಣಗಳಿದ್ದು, 33 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 406 ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.