ಕೇಂದ್ರದ ವಿರುದ್ಧ ಪ್ರತಿಭಟನೆ : ಸೆ.28ರಂದು ಕೊಡಗು ಬಂದ್ ಗೆ ಬಿಜೆಪಿಯೇತರ ಪಕ್ಷಗಳ ಕರೆ

ಮಡಿಕೇರಿ ಸೆ.26 : ಕೇಂದ್ರ ಸರ್ಕಾರದ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಸೆ.28ರಂದು ರಾಜ್ಯವ್ಯಾಪಿ ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಕರೆ ನೀಡಿರುವ ಹೋರಾಟಕ್ಕೆ ಬೆಂಬಲ ಸೂಚಿಸಲು ಕೊಡಗಿನ ಬಿಜೆಪಿಯೇತರ ಪಕ್ಷಗಳು ನಿರ್ಧರಿಸಿವೆ. ಅಲ್ಲದೆ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಕೊಡಗು ಬಂದ್ ಮಾಡಿ ರೈತಪರ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಪ್ರಮುಖರು ಮನವಿ ಮಾಡಿದ್ದಾರೆ.
ನಗರದ ಗಾಂಧಿ ಮೈದಾನದಲ್ಲಿ ಕಾಂಗ್ರೆಸ್, ಜೆಡಿಎಸ್, ಎಸ್‍ಡಿಪಿಐ, ಸಿಪಿಐಎಂ, ದಲಿತ, ಕಾರ್ಮಿಕ, ರೈತ ಸಂಘಟನೆಗಳ ಪ್ರಮುಖರು ಪೂರ್ವಭಾವಿ ಸಭೆ ನಡೆಸಿ ಕೊಡಗು ಬಂದ್ ಮತ್ತು ಪ್ರತಿಭಟನೆ ನಡೆಸುವ ಕುರಿತು ಚರ್ಚಿಸಿದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಮೋಟಾರು ವಾಹನಗಳ ಯೂನಿಯನ್‍ಗಳ ಬೆಂಬಲ ಪಡೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ಮಸೂದೆಗಳ ವಿರುದ್ಧ ಕೊಡಗಿನ ಗಡಿಭಾಗಗಳನ್ನು ಬಂದ್ ಮಾಡಿ ವಿರೋಧ ವ್ಯಕ್ತಪಡಿಸುವುದು ಮತ್ತು ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲು ಎಲ್ಲರೂ ಸಹಕಾರ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ನ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್ ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಸಿಪಿಐಎಂ ಕಾರ್ಯದರ್ಶಿ ಡಾ.ಈ.ರಾ.ದುರ್ಗಾಪ್ರಸಾದ್, ಎಸ್‍ಡಿಪಿಐನ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹಿಸಿನ್, ಮನ್ಸೂರ್ ಆಲಿ, ದಲಿತ ಸಂಘಟನೆಯ ಪ್ರಮುಖರಾದ ಕೆ.ಬಿ.ರಾಜು, ಮೋಹನ್ ಮೌರ್ಯ, ವಸತಿ ಮತ್ತು ಭೂಮಿ ಹಕ್ಕು ಹೋರಾಟ ಸಮಿತಿಯ ಹೆಚ್.ಕೆ.ಮೊಣ್ಣಪ್ಪ, ಪ್ರಗತಿ ಪರ ಸಂಘಟನೆಯ ಎಚ್.ಎಂ.ಕಾವೇರಿ, ಮೋಹನ್ ದಾಸ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡು ಕೊಡಗು ಬಂದ್ ಗೆ ಬೆಂಬಲ ಸೂಚಿಸಿದರು.


