ಮಡಿಕೇರಿ ಗದ್ದುಗೆ ಒತ್ತುವರಿ ಜಾಗದ ಸರ್ವೆಗೆ ಹಿನ್ನಡೆ

30/09/2020

ಮಡಿಕೇರಿ ಸೆ.30 : ರಾಜ್ಯ ಹೈಕೋರ್ಟ್ ಸೂಚನೆಯ ಪ್ರಕಾರ ಮಡಿಕೇರಿಯ ಐತಿಹಾಸಿಕ ರಾಜರ ಗದ್ದುಗೆಯ ಜಾಗ ಒತ್ತುವರಿಗೆ ಸಂಬಂಧಿಸಿದಂತೆ ಇಂದು ನಡೆಯಬೇಕಿದ್ದ ಸರ್ವೇ ಕಾರ್ಯ ಅರ್ಜಿದಾರರು ಮತ್ತು ಪ್ರತಿವಾದಿಗಳ ಒಮ್ಮತದ ಅಭಿಪ್ರಾಯದಂತೆ ಮತ್ತೆ ಮುಂದೂಡಿಕೆಯಾಗಿದೆ.
ಜಿಲ್ಲಾಡಳಿತದ ಸೂಚನೆಯಂತೆ ಇಂದು ತಹಶೀಲ್ದಾರ್ ಮಹೇಶ್ ನೇತೃತ್ವದಲ್ಲಿ ಕಂದಾಯ, ಸರ್ವೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರ್ವೆಗೆ ಮುಂದಾದರು. ಈ ಸಂದರ್ಭ ಆಕ್ಷೇಪ ವ್ಯಕ್ತಪಡಿಸಿದ ಒತ್ತುವರಿದಾರರ ಪರ ವಕೀಲ ಕೆ.ಆರ್.ವಿದ್ಯಾಧರ್, ಸುಮಾರು ಒಂದೂವರೆ ಎಕರೆಯಷ್ಟು ಭೂಮಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ಅದರಂತೆ ನ್ಯಾಯಾಲಯ 3 ಅಂಶಗಳ ಸೂಚನೆಯನ್ನೂ ನೀಡಿದೆ ಎಂದರು.
ಈಗಾಗಲೇ ಒತ್ತುವರಿಯಾಗಿರುವ ಜಾಗದಿಂದ ಗದ್ದುಗೆಗೆ ಏನಾದರೂ ತೊಂದರೆ ಇದೆಯೆ ಎಂಬ ಬಗ್ಗೆ ಪರಿಶೀಲಿಸಬೇಕು, ತೊಂದರೆ ಇಲ್ಲವೆಂದಾದರೆ ಆ ಜಾಗವನ್ನು ಒತ್ತುವರಿದಾರರಿಗೆ ನೀಡುವ ಬಗ್ಗೆ ಪರಿಶೀಲಿಸಬೇಕು. ಒಂದು ವೇಳೆ ತೊಂದರೆ ಇದೆ ಎಂದಾದರೆ ಗದ್ದುಗೆಗೆ ಸೇರಿರುವ ಸುಮಾರು 19.88 ಎಕರೆ ಪ್ರದೇಶದಲ್ಲಿಯೇ ಒತ್ತುವರಿದಾರರಿಗೆ ಜಾಗ ನೀಡಬೇಕು. ಇದೂ ಸಾಧ್ಯವಾಗದಿದ್ದಲ್ಲಿ, ಪರ್ಯಾಯ ಜಾಗವನ್ನು ಒದಗಿಸಿಕೊಡಬೇಕೆಂಬ ಸೂಚನೆ ನೀಡಿದ್ದು, ಇದು ಪಾಲನೆಯಾಗಬೇಕು. ಈ ಬಗ್ಗೆ ಒತ್ತುವರಿದಾರರು ದಿ.ಎ.ಕೆ.ಸುಬ್ಬಯ್ಯ ಅವರ ಮೂಲಕ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದಾರೆ ಎಂದು ವಿದ್ಯಾಧರ್ ದಂಡಾಧಿಕಾರಿಗಳ ಗಮನ ಸೆಳೆದರು.
ಇಂದು ಕೈಗೆತ್ತಿಕೊಂಡಿರುವ ಸರ್ವೆ ಕಾರ್ಯ ಸಂಬಂಧ ಒತ್ತುವರಿದಾರರಿಗೆ ಯಾವುದೇ ನೋಟೀಸ್ ನೀಡಿಲ್ಲ. ಸರ್ವೆ ನಿಯಮ ಪಾಲನೆ ಎಲ್ಲೂ ಆಗಿಲ್ಲ ಎಂದು ಆಕ್ಷೇಪಿಸಿದರು. ಕೇವಲ ದೂರಿನಲ್ಲಿ ಪ್ರಸ್ತಾಪಿಸಿರುವ ನನ್ನ ಕಕ್ಷಿದಾರರ ಜಾಗವನ್ನು ಮಾತ್ರ ಸರ್ವೆ ಮಾಡುವುದಕ್ಕೆ ಆಕ್ಷೇಪವಿದೆ. ಸರ್ವೆ ನಡೆಸುವುದಾದರೆ ಗದ್ದುಗೆಗೆ ಸೇರಿದ ಸುಮಾರು 19.88 ಎಕರೆ ಜಾಗವನ್ನು ಕೂಡ ಸರ್ವೆ ಮಾಡಬೇಕು. ಆ ಮೂಲಕ ಗದ್ದುಗೆ ಗಡಿ ಗುರುತು ಮಾಡಿ ಆಗಿರುವ ಎಲ್ಲಾ ಒತ್ತುವರಿಗಳನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಈ ನಿಲುವಿಗೆ ವೀರಶೈವ ಮಹಾಸಭಾ ಮತ್ತು ಶರಣ ಸಾಹಿತ್ಯ ಪರಿಷತ್ ಪ್ರಮುಖರು ಕೂಡ ಒಪ್ಪಿಗೆ ಸೂಚಿಸಿದರು. ನ್ಯಾಯಾಲಯದ ಸೂಚನೆಗಳಿಗೆ ತಾವುಗಳು ಕೂಡ ಬದ್ಧರಾಗಿರುವುದಾಗಿ ತಿಳಿಸಿದ ಅರ್ಜಿದಾರರು, ಮುಂದಿನ ದಿನದಲ್ಲಿ ಸಂಪೂರ್ಣ ಪ್ರದೇಶ ಸರ್ವೆಯಾಗಲಿ ಎಂದು ಹೇಳಿದರು.
ನಂತರ ಸ್ಥಳದಲ್ಲಿದ್ದ ಎಡಿಎಲ್ ಆರ್ ಅವರೊಂದಿಗೆ ಚರ್ಚೆ ನಡೆಸಿದ ದಂಡಾಧಿಕಾರಿ ಮಹೇಶ್ ಇಂದಿನ ಸರ್ವೇಯನ್ನು ಮುಂದೂಡಲಾಗುತ್ತಿದೆ. ಮುಂದಿನ ಸರ್ವೇ ದಿನಾಂಕವನ್ನು ನೋಟೀಸ್ ನೀಡುವ ಮೂಲಕ ತಿಳಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಕಲ್ಲುಮಠದ ಮಹಾಂತ ಸ್ವಾಮೀಜಿ, ವೀರಶೈವ ಸಮಾಜದ ಜಿಲ್ಲಾ ಉಪಾಧ್ಯಾಕ್ಷರಾದ ಕಾಂತರಾಜ್, ಸುರೇಶ್, ಖಜಾಂಚಿ ಉದಯಕುಮಾರ್, ಮಾಜಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಶಾಂಭ ಶಿವಮೂರ್ತಿ, ಎಸ್.ಡಿ.ಪಿ.ಐ. ಪ್ರಮುಖರಾದ ಅಮೀನ್ ಮೊಹಿಸಿನ್, ಮನ್ಸೂರ್, ವಸತಿ ಮತ್ತು ಭೂಮಿ ಹಕ್ಕು ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಮೊಣ್ಣಪ್ಪ, ಕಂದಾಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.
::: ಮಹದೇವಪ್ಪ ಅರ್ಜಿ ಸಲ್ಲಿಸಿದ್ದರು :::
ಮಡಿಕೇರಿ ಗದ್ದುಗೆ ಪ್ರದೇಶ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಿ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರಿಸುವ ಮೂಲಕ ಸ್ಮಾರಕಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳುವಂತೆ ಹಲವಾರು ವರ್ಷಗಳ ಹಿಂದೆ ಜಿಲ್ಲಾ ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾಗಿದ್ದ ದಿ.ಎಸ್.ಪಿ.ಮಹದೇವಪ್ಪ ಅವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಾಲೂಕು ದಂಡಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಕಳೆದ 10 ವರ್ಷದ ಹಿಂದೆಯೇ ಈ ಬಗ್ಗೆ ಸೂಚನೆ ನೀಡಿದ್ದರೂ ಆಡಳಿತ ವ್ಯವಸ್ಥೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿ ವೀರಶೈವ ಸಮಾಜ ಹಾಗೂ ಶರಣ ಸಾಹಿತ್ಯ ಪರಿಷತ್ ಪ್ರಮುಖರು ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
———- ಅಭಿಪ್ರಾಯ ——-

ನ್ಯಾಯಾಲಯದ ಆದೇಶದಂತೆ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸುವ ಮೂಲಕ ಗದ್ದುಗೆಯನ್ನು ಸಂರಕ್ಷಿಸಿಕೊಳ್ಳುವತ್ತ ಸಂಬಂಧಿಸಿದ ಪ್ರಾಚ್ಯವಸ್ತು ಇಲಾಖೆ ಗಮನಹರಿಸಬೇಕು. ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಕಾಣಬೇಕಾದರೆ ಇಂತಹ ಸ್ಮಾರಕ ಸ್ಥಳಗಳು ಸಂರಕ್ಷಣೆಯಾಗಬೇಕು. (ಶಿವಪ್ಪ, ವೀರಶೈವ ಸಮಾಜ, ಜಿಲ್ಲಾಧ್ಯಕ್ಷ)

ನ್ಯಾಯಾಲಯ ಆದೇಶ ನೀಡಿ ಹಲವು ವರುಷಗಳೇ ಕಳೆದಿದೆ. ಇದುವರೆಗೂ ಸರ್ವೆ ಕಾರ್ಯವಾಗಲಿ, ಒತ್ತುವರಿ ತೆರವು ಕಾರ್ಯವಾಗಲಿ ನಡೆದಿಲ್ಲ. ಕೇವಲ 3.5 ಎಕರೆ ಪ್ರದೇಶವನ್ನ ಮಾತ್ರವೇ ಸಂರಕ್ಷಣೆ ಮಾಡಲಾಗಿದೆ. ತಕ್ಷಣ ಜಿಲ್ಲಾಡಳಿತ ನ್ಯಾಯಾಲಯದ ಆದೇಶ ಪಾಲನೆಗೆ ಮುಂದಾಗಬೇಕು. (ಮಹೇಶ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ)

ಮಡಿಕೇರಿ ಗದ್ದುಗೆ ಪ್ರದೇಶ 19.88 ಎಕರೆ ಪ್ರದೇಶದಲ್ಲಿದೆ. ಈಗ ಕೇವಲ 1.25 ಎಕರೆ ಪ್ರದೇಶದ 27 ಮನೆಗಳನ್ನು ಮಾತ್ರವೇ ಸರ್ವೆ ನಡೆಸಿ ಒತ್ತುವರಿ ಗುರುತು ಮಾಡುವುದು ಸರಿಯಾದ ಕ್ರಮವಲ್ಲ. ಸರ್ವೆ ನಡೆಸುವುದಾದರೇ ಸಂಪೂರ್ಣ ಪ್ರದೇಶವನ್ನು ಸರ್ವೆ ಮಾಡಿ ಗಡಿ ಗುರುತು ಮಾಡಲಿ. ನ್ಯಾಯಾಲಯದ ಸೂಚನೆ ಯಥಾವತ್ತಾಗಿ ಪಾಲನೆಯಾಗಲಿ. ಈ ಪ್ರಕರಣವನ್ನು ನ್ಯಾಯಾಲಯ ಮಾನವೀಯ ದೃಷ್ಟಿಯಲ್ಲಿ ನೋಡಿದ್ದು, ನಮಗೂ ನ್ಯಾಯ ಸಿಗುವ ವಿಶ್ವಾಸವಿದೆ. (ವಿದ್ಯಾಧರ, ಒತ್ತುವರಿದಾರರ ಪರ ವಕೀಲರು.