ಕೊಡವ ಸಮಾಜಗಳ ಸಭೆ : ಕೊಡವರ ಧಾರ್ಮಿಕ ಹಕ್ಕು – ಸಾಂಪ್ರದಾಯಿಕ ಉಡುಪನ್ನು ಪ್ರಶ್ನಿಸಿರುವುದಕ್ಕೆ ತೀವ್ರ ಖಂಡನೆ

October 3, 2020

ಮಡಿಕೇರಿ ಅ. 3 : ಇತ್ತೀಚೆಗೆ ಭಾಗಮಂಡಲ ನಾಗರಿಕ ಸಮಿತಿ ಎಂಬ ಹೆಸರಿನಲ್ಲಿ ಒಂದು ಸಮುದಾಯದ ಕೆಲವು ಪ್ರಮುಖರು ಕೊಡವರು ಸಾಂಪ್ರದಾಯಿಕ ಉಡುಪು ತೊಟ್ಟು ತಲಕಾವೇರಿ, ಭಾಗಮಂಡಲ ಧಾರ್ಮಿಕ ಕ್ಷೇತ್ರಕ್ಕೆ ಬರಬಾರದು ಎಂದು ಹಾಗೂ ಈ ಕ್ಷೇತ್ರದಲ್ಲಿನ ಕೊಡವರ ಕೆಲವೊಂದು ಧಾರ್ಮಿಕ ಹಕ್ಕುಗಳನ್ನು ಪ್ರಶ್ನಿಸಿರುವುದನ್ನು ಕೊಡವ ಸಮಾಜಗಳ ಒಕ್ಕೂಟ ಖಂಡಿಸುತ್ತದೆ.

ಅಖಿಲ ಕೊಡವ ಸಮಾಜ ಹಾಗೂ ಕೊಡವ ಸಮಾಜಗಳ ಒಕ್ಕೂಟ ಜಂಟಿ ಆಶ್ರಯದಲ್ಲಿ ವಿರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಕರೆಯಲಾಗಿದ್ದ ಜಿಲ್ಲೆಯ ಎಲ್ಲಾ ಕೊಡವ ಸಮಾಜಗಳ ಅಧ್ಯಕ್ಷರುಗಳ ಮಹತ್ವದ ಸಭೆಯಲ್ಲಿ ತೀವ್ರ ಖಂಡನೆ ವ್ಯಕ್ತಪಡಿಸಿ, ಕೆಲವು ಮಹತ್ವದ ನಿರ್ಣಯಗಳನ್ನು ಸರ್ವಾನುಮತಗಳಿಂದ ಅಂಗೀಕರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ, ಕಾವೇರಿ ಮಾತೆ ಕೊಡವರ ಕುಲದೇವಿ ಎಂಬುವುದು ಪ್ರಶ್ನಾತೀತವಾಗಿದೆ. ಕೊಡವರು ಹಾಗೂ ಕಾವೇರಿ ಮಾತೆಯ ಭಾಂದವ್ಯ ಆಧಿಮೂಲದಿಂದ ಇರುವಂತದ್ದು ಎಂಬುದನ್ನು ಕೆಲವರು ಮರೆತಂತಿದೆ. ಕುಲಮಾತೆಯೊಂದಿಗೆ ಕೊಡವರ ಬಾಂಧವ್ಯ ಹೇಗಿದೆ ಎನ್ನುವುಕ್ಕೆ ಸಾಕ್ಷಿ ಎಂಬಂತೆ ಅಪ್ಪಚ್ಚೀರ ಕುಟುಂಬಸ್ಥರು ನೂರಾರು ಭಟ್ಟಿ ಕೃಷಿ ಭೂಮಿಯನ್ನು ಈ ಕ್ಷೇತ್ರದ ನಿರ್ವಹಣೆಗೆ ದಾನವಾಗಿ ಅನಾದಿ ಕಾಲದಲ್ಲಿಯೇ ಕೊಟ್ಟಿರುವುದು ಹಾಗೆಯೇ ಕಳ್ಳಂಗಡ ಹಾಗೂ ಪಟ್ಟಮಾಡ ಕುಟುಂಬ ಸಹ ದಾನವಾಗಿ ನೀಡಿರುವ ಕೃಷಿ ಭೂಮಿಯಿಂದ ಭತ್ತ ಬೆಳೆದು ಅಕ್ಕಿಯನ್ನು ಕ್ಷೇತ್ರಕ್ಕೆ ನೀಡುತ್ತಾ ಬರುತ್ತಿದ್ದಾರೆ. ಆದರೆ ಈ ಹಿಂದೆ ಅಪ್ಪಚ್ಚೀರ ಕುಟುಂಬಸ್ಥರು ದಾನಕೊಟ್ಟಿರುವ ಕೃಷಿ ಭೂಮಿ ಯಾರ ವಶದಲ್ಲಿದೆ ಎಂದು ಪ್ರಶ್ನಿಸಿದರು.
ಈ ಹಿಂದೆ ಕೊಡವರು ತೀರ್ಥೋದ್ಬವ ಮಾತ್ರವಲ್ಲ ಶಿವರಾತ್ರಿ ಉತ್ಸವದಂದು ಕೂಡ ತಲಕಾವೇರಿ ಕ್ಷೇತ್ರಕ್ಕೆ ಭಾಗಮಂಡಲದಿಂದ ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ದುಡಿಕೊಟ್ಟ್ ಪಾಟ್ ನಡೆಸುತ್ತಾ ಬಂದು ಲಕ್ಷಾದೀಪದ ಸುತ್ತಾ ಹಾಡುತ್ತಿದ್ದದನ್ನು ನಾನೂ ಚಿಕ್ಕವನಿರುವಾಗಲೇ ಕಣ್ಣಾರೆ ಕಂಡಿದ್ದೇನೆ ಎಂದರು.
ತಕ್ಕಾಮೆಯ ವಿಚಾರದಲ್ಲಿ ಮಾತನಾಡಿದ ಅವರು ತಕ್ಕರಿಗೆ ಪತ್ತಾಯಕ್ಕೆ ಅಕ್ಕಿ ಹಾಕಲು ಆದ್ಯತೆ ಇದ್ದರೂ, ತದನಂತರ ಅಲ್ಲಿರುವ ಪ್ರತಿಯೊಬ್ಬ ಭಕ್ತರಿಗೂ ಕೂಡ ಇದರಲ್ಲಿ ಪಾಲ್ಗೊಳ್ಳಲು ಅವಕಾಶವಿದೆ, ಇದನ್ನು ವಿರೋಧಿಸುವಂತಿಲ್ಲ. ತಕ್ಕರಾದವರು ಈ ನಾಡಿನ ಸಂಪ್ರದಾಯದಂತೆ ಹಬ್ಬ ಹರಿದಿನಗಳನ್ನು ಸಾಂಪ್ರದಾಯಿಕ ಉಡುಗೆ ತೊಟ್ಟು ಆಚರಣೆಯನ್ನು ಮಾಡುವುದು ಈ ಮಣ್ಣಿನ ಕೊಡವ ಸಂಸ್ಕೃತಿ. ಹೀಗಿರುವಾಗ ಕಳೆದ ಹಲವು ವರ್ಷಗಳ ಹಿಂದೆ ಪ್ರಸಕ್ತ ತಕ್ಕಾಮೆಯನ್ನು ನಡೆಸುತ್ತಿರುವ ಕುಟುಂಬದವರು ಹಬ್ಬದಂದು ತಲಕಾವೇರಿಗೆ ದೇವರ ಭಂಡಾರ ಪೆಟ್ಟಿಗೆ ತರುವಾಗ ಕುಪ್ಯಚೇಲೆ ಧರಿಸುತ್ತಿರಲ್ಲಿಲ್ಲ. ಕೊಡವ ಏಕೀಕರಣ ರಂಗದವರೇ ಸಾಂಪ್ರದಾಯಿಕ ಉಡುಗೆ ತೊಟ್ಟು ಹಬ್ಬವನ್ನು ಹೇಗೆ ಆಚರಿಸಬೇಕು ಎಂದು ಇವರಿಗೆ ತೋರಿಸಿಕೊಟ್ಟು ಮುಂದಿನ ವರ್ಷದಿಂದ ಹೀಗೆ ಮಾಡಿ ಎಂದು ಪ್ರೆರೇಪಿಸಿರುವುದನ್ನು ಸಭೆಯ ಗಮನಕ್ಕೆ ತಂದರು.
ಅಲ್ಲಿಯತನಕ ಇವರು ಭಂಡಾರ ಪೆಟ್ಟಿಗೆಯನ್ನು ಜೀಪಿನ ಮೂಲಕ ತರುತ್ತಿದ್ದರು, ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆಯ ಮೂಲಕ ಸಾಗುವಂತೆ ಏಕೀಕರಣ ರಂಗವೇ ಅಡಿಪಾಯ ಹಾಕಿಕೊಟ್ಟಿತ್ತು. ಆದರೆ ಇದೀಗ ಈ ವಿಚಾರವಾಗಿ ಆದೇ ಸಮುದಾಯದ ಕೆಲವರು ಕೊಡವರ ಉಡುಗೆಯ ವಿರುದ್ದ ದ್ವನಿ ಎತ್ತುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಇದು ಮೇಲ್ನೋಟಕ್ಕೆ ಹೆಸರಿಗಷ್ಟೇ ಭಾಗಮಂಡಲದ ನಾಗರಿಕರ ಸಭೆ, ಆದರೆ ಪಾಲ್ಗೊಂಡಿದ್ದವರೆಲ್ಲಾರು ಇವರ ಸಮಾಜದ ಗಣ್ಯ ವ್ಯಕ್ತಿಗಳು, ಇವರ ಬಾಲೀಶ ಹೇಳಿಕೆಗಳು ಚಿಲ್ಲರೆ ವಿಷಯವಾಗಿ ಕಾಣುತ್ತಿದೆ. ಯಾವುದೇ ಕಾರಣಕ್ಕೂ ಕೊಡವರ ಸಾಂಪ್ರದಾಯದ ಹಾಗೂ ಹಕ್ಕು ಭಾದ್ಯತೆಗಳ ವಿರುದ್ಧದ ಹೇಳಿಕೆಯನ್ನು ನಾವು ಸಹಿಸುವುದಿಲ್ಲ. ಇಂತಹ ಅನಾಗರಿಕ ವರ್ತನೆಯನ್ನು ಈ ಸಮುದಾಯದ ಪ್ರಬುದ್ಧರು ತಕ್ಷಣ ಖಂಡಿಸಬೇಕಿತ್ತು. ಇದನ್ನು ನಾವು ಕೂಡ ನಿರೀಕ್ಷಿಸಿದ್ದೇವು, ಆದರೆ ಇದೀಗ ಕೊಡವ ಸಮುದಾಯಕ್ಕೆ ನಿರಾಶೆ ಆಗಿದೆ ಇವರ ಮತ್ತೊಂದು ಹೇಳಿಕೆಯನ್ನು ನೋಡಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಮಾತನಾಡಿ, ಕೊಡಗಿನ ಮೂಲ ನಿವಾಸಿಗಳಾದ ಕೊಡವರ ಕುಲದೇವತೆ ಕಾವೇರಿ ಹಾಗೂ ಉಡುಪಿನ ಬಗ್ಗೆ ಯಾರು ಪ್ರಶ್ನಿಸುವಂತಿಲ್ಲ. ಕೊಡವರ ಆಸ್ತಿತ್ವ ಹಾಗೂ ಸಂಪ್ರದಾಯದ ಬಗ್ಗೆ ಬಾಲೀಶ ಹಾಗೂ ಅನಾಗರಿಕ ಹೇಳಿಕೆಗಳನ್ನು ಇನ್ನು ನಮ್ಮಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಪ್ರತಿನಿದಿಸಿದ್ದ ಜನಪ್ರತಿನಿಧಿಗಳು ಇಂತಹ ಅಹಿತಕರ ಹೇಳಿಕೆ ಹಾಗೂ ಬೆಳವಣಿಗಳನ್ನು ಖಂಡಿಸಿ ಸಭೆ ಕರೆದು ಸಾಮರಸ್ಯಕ್ಕೆ ನಾಂದಿ ಹಾಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೆ ಈ ಕೆಲಸವನ್ನು ಮಾಡದಿರುವುದು ಬೇಸರ ತಂದಿದೆ. ನಾವು ಮತಚಲಾಯಿಸುವಾಗ ಕೊಡಗಿನಲ್ಲಿ ಜಾತಿಯನ್ನು ಚಿಂತಿಸದೇ ಎಲ್ಲಾ ವರ್ಗದವರನ್ನು ಇಲ್ಲಿಯವರೆಗೆ ಚುನಾಯಿಸುತ್ತಾ ಬಂದಿರುತ್ತೇವೆ. ಇದು ಕೊಡವರ ವಿಶಾಲ ಮನೋಭಾವಕ್ಕೆ ಸಾಕ್ಷಿ ಎಂದರು. ಈ ನಾಡಿನ ಸಮಸ್ತರ ಒಳಿತನ್ನೇ ಬಯಸುವ ನಾವು ಈ ಹಿಂದೆ ಮೂಲ ನಿವಾಸಿಗಳ ಸಭೆಯನ್ನು ಕರೆದಿದ್ದೇವು, ಕಾರಣಾಂತರಗಳಿಂದ ಅದು ಮುಂದೂಡಲಾಗಿದ್ದು, ಜನಪ್ರತಿನಿಧಿಗಳು ಈ ಎರಡು ಪ್ರಮುಖ ಜನಾಂಗ ಸಾಮರಸ್ಯದೊಂದಿಗೆ ನಾಡಿನ ಶಾಂತಿಯನ್ನು ಕಾಪಾಡಬೇಕೆಂದು ಆಗ್ರಹಿಸಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ ಮಾತನಾಡಿ, ಈ ಕ್ಷೇತ್ರದ ಧಾರ್ಮಿಕ ಕಾರ್ಯಗಳು ಈ ಮಣ್ಣಿನ ಸಂಸ್ಕೃತಿ ಸಂಪ್ರದಾಯದಂತೆ ನಡೆಯಬೇಕು. ಇಲ್ಲದಿದ್ದಲ್ಲಿ ಕಾವೇರಿ ಮಾತೆ ಮುನಿಸಿಕೊಂಡು ಅನಾಹುತಕ್ಕೆ ಕಾರಣವಾಗುತ್ತದೆ ಎಂಬ ವಿಚಾರವಾಗಿ ಈ ಹಿಂದೆ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದುಬಂದಿರುತ್ತದೆ. ಅಲ್ಲದೇ ಇಲ್ಲಿನ ಮೂಲ ತಕ್ಕರಾದ ಮಂಡಿರ, ಮಣವಟ್ಟಿರ ಹಾಗೂ ಪಟ್ಟಮಾಡ ಕುಟುಂಬಗಳ ಪ್ರಶ್ನೆಯಲ್ಲಿ ಬಂದಿರುವ ಬಗ್ಗೆ ನಡಾವಳಿಕೆ ಪುಸ್ತಕದಲ್ಲಿ ದಾಖಲಾಗಿರುತ್ತದೆ. ಈ ಹಿಂದೆ ಭಾಗಮಂಡಲ – ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಡಿರ ಕುಟುಂಬಸ್ಥರ ಹೆಸರಿನಲ್ಲಿ ಒಂದು ಸಾವಿರಕ್ಕೂ ಅಧಿಕ ಎಕರೆ ಜಮೀನು ಇದ್ದದ್ದನ್ನು ಉಲ್ಲೇಖಿಸಿದ ಅವರು ಈಗಲೂ ಹಳೆಯ ಜಮಾಬಂದಿಯಲ್ಲಿ ಈ ಕುಟುಂಬದ ಹೆಸರು ದಾಖಲಾಗಿರುತ್ತದೆ ಎಂದರು.
ಪೆÇನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಮಾತನಾಡಿ, ಪ್ರಸಕ್ತ ತಕ್ಕಾಮೆಯನ್ನು ನಡೆಸುತ್ತಿರುವ ವ್ಯಕ್ತಿಗಳಿಗೆ ಕೊಡವ ಸಾಂಪ್ರದಾಯಿಕ ಪದ್ದತಿಯಲ್ಲಿ ನಡೆಸಲು ಕೊಡಗು ಏಕೀಕರಣ ರಂಗ ಕಲಿಸಿಕೊಟ್ಟಿದ್ದೆ ತಪ್ಪಾಯಿತು ಎಂದು ವಿಷಾದ ವ್ಯಕ್ತಪಡಿಸಿದರು. ನಾವಾಗಿ ಇಲ್ಲಿಯವರೆಗೆ ಯಾವುದೇ ಜಾತಿ, ಜನಾಂಗಗಳ ಸಂಪ್ರದಾಯ, ಸಂಸ್ಕೃತಿಯ ವಿರುದ್ದ ಮಾತನಾಡಿದ ನಿದರ್ಶನಗಳಿಲ್ಲ. ಆದರೆ ಭಾಗಮಂಡಲದಲ್ಲಿ ಸಭೆ ನಡೆಸಿದ ಜನಾಂಗದ ಕೆಲವರು ಕೊಡವರ ವಿರುದ್ದ ನೀಡಿರುವ ಹೇಳಿಕೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾವೇರಿ ಕಣಿಪೂಜೆಯನ್ನು ಕೊಡವರು ಆಚರಿಸುತ್ತಿರುವಂತೆ ಈ ವರ್ಗದವರು ನಡೆಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಕಾವೇರಿ ಕೊಡವರಿಗೆ ಕುಲದೇವತೆ ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ದೇಶ ರಕ್ಷಕರಾಗಿರುವ ಕೊಡವರು, ಕೊಡಗಿನ ರಕ್ಷಣೆ ಮಾಡುವುದರಲ್ಲಿ ಹಿಂದೇಟು ಹಾಕುವವರಲ್ಲ. ಕೇವಲ ಈ ನಾಡಿನ ಶಾಂತಿಯುತ ಬದುಕನ್ನು ಪರಿಗಣಿಸಿ ತಾಳ್ಮೆ ವಹಿಸುತ್ತಿದ್ದೇವೆ. ನಮ್ಮ ಸಂಸ್ಕೃತಿಯ ವಿರುದ್ದ ಮಾತನಾಡಿದರೆ ಇನ್ನೂ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.
1785ರಲ್ಲಿ ಟಿಪ್ಪು ವಿರುದ್ದ ದೇವಾಟ್‍ಪರಂಬು ಹತ್ಯಾಕಾಂಡದಲ್ಲಿ ತಾವ್‍ನಾಡ್‍ನಲ್ಲಿದ್ದ ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ತೆತ್ತರು. ಇದರಿಂದ ಪ್ರತಿ ಕುಟುಂಬದಲ್ಲಿ ಯುದ್ದದಲ್ಲಿ ಪಾಲ್ಗೊಂಡಿದ್ದ ಪುರುಷರು, ಯುವಕರು ಪ್ರಾಣ ತೆತ್ತರು. ಆ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು, ವೃದ್ದರು ಉಳಿದುಕೊಂಡರು. ಇಂತಹ ಸಂದರ್ಭ ಅಭದ್ರತೆಯಿಂದ ಸಂಬಂಧಿಕರ ಸ್ಥಳಗಳಿಗೆ ತೆರಳಿದರು. ಇಂತಹ ಸಮಯದಲ್ಲಿ ಆಗಿನ ರಾಜ ಹೊರಗಿನಿಂದ ಸಾವಿರಾರು ಎಕರೆ ಪಾಳುಬಿಟ್ಟ ಕೃಷಿ ಭೂಮಿಯನ್ನು ರೂಪಿತಮಾಡಲು ಹೊರಗಿನಿಂದ ಜನರನ್ನು ಕರೆತಂದು ಕೃಷಿ ಮಾಡಲು ನಿಯೋಜಿಸಿದರು. ಈ ಸಂದರ್ಭ ಸಹಜವಾಗಿಯೇ ಕೆಲವರಿಗೆ ತಕ್ಕಾಮೆಯನ್ನು ನೀಡಲಾಯಿತು ಎಂದರು.
ಕನ್ನಿ ಕಾವೇರಿ ಟ್ರಸ್ಟಿನ ಸಂಚಾಲಕ ಮುಲ್ಲೇಂಗಡ ಶಂಕರಿ ಪೆÇನ್ನಪ್ಪ ಮಾತನಾಡಿ ತಲಕಾವೇರಿಯಲ್ಲಿ ಮೂಲ ತಕ್ಕಾಮೆ ಹೊಂದಿರುವ ಮೂರು ಕೊಡವ ಕುಟುಂಬಗಳ ಬಗ್ಗೆ ಕೊಡವರ ಧಾರ್ಮಿಕ ಹಕ್ಕು ಹಾಗೂ ಉಡುಪನ್ನು ಪ್ರಶ್ನಿಸಿರುವ ಜನಾಂಗದವರೇಯಾದ ದಿವಂಗತ ಹೊಸೂರು ನಾಣಯ್ಯನವರು ಈ ಹಿಂದೆಯೇ ಈ ಮೂರು ಮೂಲ ತಕ್ಕಾಮೆಯ ಕೊಡವ ಕುಟುಂಬಕ್ಕೆ “ಪೂಕುರಿ”ಯನ್ನು ಹಿಡಿಯಲು ಹಕ್ಕು ಹೊಂದಿದ್ದು, ಅವರ ಅನುಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯ ಹಾಗೂ ಉತ್ಸವ ಅಪರಿಪೂರ್ಣ ಎಂದು ನನ್ನ ಗಮನಕ್ಕೆ ಬಹಳ ಹಿಂದೆಯೇ ತಂದಿದ್ದರು. ಹಾಗೇ ಅವರ ಜನಾಂಗದ ಜೊತೆಯಲ್ಲಿ ಕೂಡ ಸತ್ಯವನ್ನು ಹೇಳಿದ್ದ ಹೊಸೂರು ನಾಣಯ್ಯರವರನ್ನು ಅವರ ಜನಾಂಗದ ಕೆಲವರು ಬಹಿಷ್ಕಾರ ಮಾಡಿದರು. ಆದುದರಿಂದ ನಾಣಯ್ಯನವರು ಮೃತರಾದ ನಂತರ ಅವರ ಅಂತ್ಯಕ್ರಿಯೆ ಮತ್ತು ತಿಥಿಕರ್ಮಾಂತರವನ್ನು ಕೊಡವನಾದ ನನ್ನ ನೇತೃತ್ವದಲ್ಲೆ ನಾವು ಕೆಲವು ಕೊಡವರು ಸೇರಿಕೊಂಡು ಮಾಡಿದ್ದೇವು ಎಂದು ನೆನಪಿಸಿಕೊಂಡರು.
ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ ಭಾಗಮಂಡಲದಲ್ಲಿ ನಡೆದ ಸಭೆಯು ಕಿಡಿಗೇಡಿತನದ ವ್ಯಕ್ತಿಗಳು ನಡೆಸಿದ ಬೇಜವಬ್ದಾರಿಯುತವಾದ ಹೇಳಿಕೆಯನ್ನು ಖಂಡಿಸಿದ ಅವರು ಇಂತಹ ವ್ಯಕ್ತಿಗಳು ಸತ್ಯದ ವಿರುದ್ದ ನಡೆಸುತ್ತಿರುವ ಷಢ್ಯಂತರವಾಗಿದೆ. ಇದನ್ನು ನಾವೆಲ್ಲರೂ ಒಕ್ಕೊರಳಿನಿಂದ ಖಂಡಿಸಬೇಕಾಗಿದೆ ಎಂದರು.
ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಅವರು ಮಾತನಾಡಿ ಇತ್ತಿಚೀನ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿ ಇದು ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಿದೆ ಎಂದರು.
ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಮಾತನಾಡಿ ಮುಂದಿನ ದಿನಗಳಲ್ಲಿ ಕೊಡವರ ವಿರುದ್ದದ ಯಾವುದೇ ಅಸಂಬದ್ದ ಹಾಗೂ ಅನಾಗರಿಕ ಹೇಳಿಕೆಯನ್ನು ನಾವೆಲ್ಲರೂ ಒಗ್ಗೂಡಿ ಖಂಡಿಸುವಂತಾಗಬೇಕೆಂದು ಆಗ್ರಹಿಸಿದರು.

ಸಭೆಯ ನಿರ್ಣಯ:
ಕೊಡಗಿನಲ್ಲಿ ಕೊಡವರ ಅಸ್ತಿತ್ವವನ್ನು ಯಾರು ಪ್ರಶ್ನಿಸುವಂತಿಲ್ಲ. ಕೊಡವರ ಸಾಂಪ್ರದಾಯಿಕ ಉಡುಗೆ ತೊಡುಗೆ ಹಾಗೂ ಸಾಂಸ್ಕೃತಿಕ ವಿಚಾರಗಳ ವಿರುದ್ದ ಯಾರೇ ದ್ವನಿ ಎತ್ತಿದ್ದಲ್ಲಿ ಒಗ್ಗೂಡಿ ದಿಕ್ಕರಿಸುವಂತೆ.ಕೊಡಗಿನ ಸಾಂಸ್ಕೃತಿಕ ಹಿರಿಮೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೊಡವರು ಮುಂಚೂಣಿಯಲ್ಲಿ ನಿಂತು ಸರ್ವರನ್ನು ಸಾಮರಸ್ಯದೊಂದಿಗೆ ನಡೆಸಿಕೊಂಡು ಹೋಗುವಂತೆ ನಿರ್ಣಯ.
ಕೊಡವರು ಎಂದರೆ, ಒಂದೇ ಜನಾಂಗ, ವಿಶ್ವಖ್ಯಾತಿ ಹೊಂದಿರುವ ಬುಡಕಟ್ಟು ಜನಾಂಗ ಎಲ್ಲಿಯೇ ಇರಲಿ, ಯಾವ ಸ್ಥಿತಿಯಲ್ಲಿಯೇ ಇರಲಿ ಅವರದ್ದು ಒಂದು ಸಂಪ್ರದಾಯ ಹಾಗೂ ಸಂಸ್ಕೃತಿ. ಕೊಡವರ ಆಚಾರ, ವಿಚಾರವನ್ನು ವಿರೋದಿಸುವವರು ಕಿಂಚಿತ್ತು ಬುದ್ದಿವುಳ್ಳವರೆಂದು ತೀರ್ಮಾನಿಸಲಾಯಿತು. ಕೊಡವರ ವಿರುದ್ದ ಷಡ್ಯಂತರ ರೂಪಿಸುವವರು ಒಂದು ಪ್ರದೇಶಕ್ಕೆ ಒಂದೊಂದು ಸಂಸ್ಕೃತಿ ಹಾಗೂ ಉಡುಗೆ ತೊಡುಗೆಗಳನ್ನು ಹೊಂದಿದ್ದು ಅಂತವರಿಗೆ ಕೊಡವರನ್ನು ಪ್ರಶ್ನಿಸುವ ಹಕ್ಕು ಇರುವುದಿಲ್ಲ. ಪ್ರಶ್ನಿಸಿದರೆ ಅದಕ್ಕೆ ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ರೂಪುರೇಶೆ ಸಿದ್ದಪಡಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಮೂರ್ನಾಡು ಕೊಡವ ಸಮಾಜದ ನೆರವಂಡ ಅನೂಪ್ ಉತ್ತಯ್ಯ, ಕಂಬೀರಂಡ ಗೌತಮ್, ಟಿ.ಶೆಟ್ಟಿಗೇರಿ ಕೊಡವ ಸಮಾಜದ ಕೋಟ್ರಮಾಡ ಅರುಣ್ ಅಪ್ಪಣ್ಣ, ಗೋಣಿಕೊಪ್ಪಲು ಕೊಡವ ಸಮಾಜದ ಅಜ್ಜಿಕುಟ್ಟೀರ ಸಿ. ಪೂಣಚ್ಚ, ಅಮ್ಮತ್ತಿ ಕೊಡವ ಸಮಾಜದ ಮೂಕೊಂಡ ಬೋಸ್ ದೇವಯ್ಯ, ನೆರವಂಡ ರಘು, ಪುಚ್ಚಿಮಾಡ ಅಪ್ಪಯ್ಯ, ಚೇರಂಬಾಣೆ ಕೊಡವ ಸಮಾಜದ ಬಾಚರಾಣಿಯಂಡ ಗಣಪತಿ, ಬಿರುನಾಣಿ ಮರೆನಾಡು ಕೊಡವ ಸಮಾಜದ ಕಾಯಪಂಡ ಸುನೀಲ್, ಮಕ್ಕಂದೂರು ಕೊಡವ ಸಮಾಜದ ಹಂಚೆಟ್ಟೀರ ಮುದ್ದಪ್ಪ, ಅಜ್ಜಿನಿಕಂಡ ಮಹೇಶ್ ನಾಚಯ್ಯ, ಹಲವಾರು ಸಂಘ ಸಂಸ್ಥೆ ಮುಖಂಡರು ಹಾಗೂ ಗಣ್ಯರು ಹಾಜರಿದ್ದರು.

error: Content is protected !!