ಗಾಂಧಿ ಜಯಂತಿ ಸಮಾರೋಪ : ಅ.11 ರಂದು ಡಿವೈಎಫ್‍ಐನಿಂದ ಸಿದ್ದಾಪುರದಲ್ಲಿ ಕಾರ್ಯಕ್ರಮ

October 3, 2020

ಮಡಿಕೇರಿ ಅ.3 : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್‍ಐ)ನ ಕೊಡಗು ಜಿಲ್ಲಾ ಘಟಕದ ವತಿಯಿಂದ 150ನೇ ಗಾಂಧಿ ಜಯಂತಿಯ ಕಾರ್ಯಕ್ರಮಗಳ ಸಮಾರೋಪ ಮತ್ತು ಜಯಂತಿ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಅ.11 ರಂದು ಸಿದ್ದಾಪುರದಲ್ಲಿ ನಡೆಯಲಿದೆ ಎಂದು ರಾಜ್ಯ ಸಮಿತಿ ಸದಸ್ಯ ಹೆಚ್.ಆರ್.ರಾಚಪ್ಪಾಜಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿ ಜಯಂತಿ ಪ್ರಯುಕ್ತ ಗಾಂಧೀಜಿ ಅವರ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈಗಾಗಲೇ ಅನೇಕ ಪ್ರಬಂಧಗಳನ್ನು ಸ್ವೀಕರಿಸಲಾಗಿದೆ. ಇದರ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ಅಂದು ಸಿದ್ದಾಪುರದ ಎಸ್‍ಎನ್‍ಡಿಪಿ ಹಾಲ್‍ನಲ್ಲಿ ನಡೆಯಲಿದೆ ಎಂದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳಲ್ಲಿ ಗಾಂಧಿ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕರಾದ ಅರ್ಜುನ್ ಮತ್ತು ನಾಪೋಕ್ಲು ರಾಫೆಲ್ ಇಂಟರ್ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾದ ಜೀವನ್ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡದೆ ಇರುವುದು ಖಂಡನೀಯ. ಇದನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿರುವುದಾಗಿ ತಿಳಿಸಿದರು.
ಜಿಲ್ಲಾ ಸಂಚಾಲಕ ಎಂ.ಎ.ಶಹೀರ್ ಕೊಂಡಂಗೇರಿ ಮಾತನಾಡಿ, ಡಿವೈಎಫ್‍ಐ ಸಂಘಟನೆ 1980 ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ರಾಜಕೀಯ ರಹಿತವಾಗಿ ಯುವ ಜನರನ್ನು ಸಂಘಟಿಸುತ್ತಾ ಬಂದಿದ್ದು, ಒಂದು ಕೋಟಿಯಷ್ಟು ಸದಸ್ಯರನ್ನು ಹೊಂದಿದೆಯೆಂದು ಮಾಹಿತಿ ನೀಡಿದರು.
ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ, ನಿರುದ್ಯೋಗ, ಅಜ್ಞಾನಗಳ ವಿರುದ್ಧದ ಹೋರಾಟಗಳಿಗಾಗಿ, ಎಲ್ಲರಿಗೂ ಸಮಾನ ಅವಕಾಶಗಳಿಗಾಗಿ, ಸಮಾನತೆಯ ಸಮಾಜಕ್ಕಾಗಿ, ಸಾಂಸ್ಕøತಿಕ ಮೌಲ್ಯಗಳಿಗಾಗಿ ಹೋರಾಡುವ ಸಂಘಟನೆಯಾಗಿ ಡಿವೈಎಫ್‍ಐ ರೂಪು ತಳೆದಿದೆಯೆಂದು ಹೇಳಿದರು.
ಯುವಕರು ಧರ್ಮಾಂಧತೆಗೆ ಒಳಪಡುವುದನ್ನು ತಡೆಯಲು, ಸಾಮಾಜಿಕ ಪಿಡುಗುಗಳಿಂದ ದೂರವಿರುವಂತೆ ಜಾಗೃತಿಗೊಳಿಸಲು, ಸಮಾಜದ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೊಡಗಿನಲ್ಲಿಯೂ ಈ ಸಂಘಟನೆಯ ಸಮಿತಿಯೊಂದನ್ನು ರಚಿಸಿ, ಅದರ ಮಾರ್ಗದರ್ಶನದಲ್ಲಿ ಸದಸ್ಯತನ ನೋಂದಾಯಿಸಿ ಘಟಕಗಳನ್ನು ರಚಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 24 ಘಟಕಗಳನ್ನು ರಚಿಸಲಾಗಿದ್ದು, ವಿವಿಧ ಅರ್ಥಪೂರ್ಣ ಕಾರ್ಯಕ್ರಮವನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಎಂ.ಎ.ಇರ್ಷಾದ್ ಪಡಿಯಾಣಿ, ಪಿ.ಯು.ಅಬು ತಾಹಿರ್ ಪಡಿಯಾಣಿ, ಪಿ.ಇ.ಶಾಹಿದ್ ಕುಂಜಿಲ ಹಾಗೂ ವಿರಾಜಪೇಟೆ ಘಟಕದ ಸದಸ್ಯ ಕೆ.ನೌಶೀರ್ ಉಪಸ್ಥಿತರಿದ್ದರು.

error: Content is protected !!