ಚೆಟ್ಟಿನಾಡ್ ಶೈಲಿಯಲ್ಲಿ ಎಗ್ ಗ್ರೇವಿ ಮಾಡುವ ವಿಧಾನ

06/10/2020

ಬೇಕಾಗುವ ಸಾಮಾಗ್ರಿಗಳು : ಮೊಟ್ಟೆ 4-5, ಈರುಳ್ಳಿ 1, ಟೊಮೆಟೊ 1, ಕೊತ್ತಂಬರಿ ಸೊಪ್ಪು 1 ಚಮಚ, ಗರಂ ಮಸಾಲ 1 ಚಮಚ, ರುಚಿಗೆ ತಕ್ಕ ಉಪ್ಪು, ಎಣ್ಣೆ 2 ಚಮಚ,

ಒಗ್ಗರಣೆಗೆ : ಒಂದು ಇಂಚಿನಷ್ಟು ದೊಡ್ದಿರುವ ಚಕ್ಕೆ, ಸ್ವಲ್ಪ ಕರಿಬೇವಿನ ಎಲೆ, ಲವಂಗ 1-2

ಮಸಾಲಗೆ : ಸ್ವಲ್ಪ ತೆಂಗಿನ ತುರಿ, ಕೆಂಪು ಮೆಣಸು 2, ಬೆಳ್ಳುಳ್ಳಿ ಎಸಳು 4-5, ಅರ್ಧ ಇಂಚಿನಷ್ಟು ದೊಡ್ಡದಿರುವ ಶುಂಠಿ, ಇಂಗು, ಕೊತ್ತಂಬರಿ ಬೀಜ, ಅರ್ಧ ಚಮಚ ಕರಿ ಮೆಣಸಿನ ಪುಡಿ, ಅರ್ಧ ಚಮಚ, ಜೀರಿಗೆ 1 ಚಮಚ, ತೆಂಗಿನ ತುರಿಯನ್ನು ಹುರಿದು, ಅದಕ್ಕೆ ಮಸಾಲೆಯನ್ನು ಸೇರಿಸಿ ಮತ್ತೆ 3-4 ನಿಮಿಷ ಹುರಿದು, ಉರಿಯಿಂದ ಇಳಿಸಿ ಆರಲು ಇಡಿ. ನಂತರ ನುಣ್ಣಗೆ ರುಬ್ಬಿಡಿ.

ತಯಾರಿಸುವ ವಿಧಾನ : ಮೊಟ್ಟೆಯನ್ನು ಬೇಯಿಸಿ ಅದರ ಸಿಪ್ಪೆಯನ್ನು ಸುಲಿದಿಡಿ. ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಚಕ್ಕೆ, ಲವಂಗ, ಕರಿಬೇವಿನ ಎಲೆ, ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ. ಈಗ ರುಬ್ಬಿದ ಮಿಶ್ರಣವನ್ನು ಹಾಕಿ 2 ನಿಮಿಷ ಸೌಟ್ ನಿಂದ ಆಡಿಸಿ, ರುಚಿಗೆ ತಕ್ಕ ಉಪ್ಪು ಹಾಕಿ , ಅರ್ಧ ಕಪ್ ನೀರು ಹಾಕಿ ಸಾಧಾರಣ ಹುರಿಯಲ್ಲಿ ಕುದಿಸಿ. ಮಿಶ್ರಣ ಗಟ್ಟಿಯಾದಾಗ ಮೊಟ್ಟೆಯನ್ನು ಎರಡು ಭಾಗ ಮಾಡಿ ಹಾಕಿ ಮತ್ತೆ ಎರಡು ನಿಮಿಷ ಕುದಿಸಿ, ಉರಿಯಿಂದ ಇಳಿಸಿದರೆ ಚೆಟ್ಟಿನಾಡ್ ಶೈಲಿಯಲ್ಲಿ ಎಗ್ ಗ್ರೇವಿ ರೆಡಿ.