ಮಡಿಕೇರಿಯಲ್ಲಿ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ

09/10/2020


ಮಡಿಕೇರಿ ಅ. 9 : ಮಡಿಕೇರಿ ನಗರಸಭೆ ವ್ಯಾಪ್ತಿಯ ಇಂದಿರಾ ಕ್ಯಾಂಟಿನ್ ಸಾಯಿ ರಸ್ತೆ 145 ಲಕ್ಷ ರೂ.ಗಳ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಹಾಗೂ ರಾಜಾಸೀಟು ರಸ್ತೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿವಾಸದ ಬಳಿ 172 ಲಕ್ಷ ರೂ.ವೆಚ್ಚದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಮತ್ತು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಶುಕ್ರವಾರ ಚಾಲನೆ ನೀಡಿದರು.
ಗುದ್ದಲಿ ಪೂಜೆ ಬಳಿಕ ಹಿಟಾಚಿ ಯಂತ್ರದ ಮೂಲಕ ಚಾಲನೆ ನೀಡಿದ ಶಾಸಕರು, ಮಡಿಕೇರಿ ನಗರ ವ್ಯಾಪ್ತಿಯ ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಸದ್ಯ ಮಳೆಗಾಲ ಮುಗಿಯುತ್ತಾ ಬಂದಿದ್ದು, ಮಡಿಕೇರಿ ನಗರದ ರಸ್ತೆ, ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.
ಮಡಿಕೇರಿ ನಗರದ ರಸ್ತೆ, ತಡೆಗೋಡೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ ಎಂದು ಅಪ್ಪಚ್ಚು ರಂಜನ್ ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಉತ್ತಮ ದರ್ಜೆಯ ರಸ್ತೆ ನಿರ್ಮಿಸಬೇಕು. ಜೊತೆಗೆ ಗುತ್ತಿಗೆದಾರರು ಸಹ ಗುಣಮಟ್ಟ ಕಾಯ್ದುಕೊಂಡು ರಸ್ತೆ ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು. ನಗರದ ಮುಖ್ಯ ರಸ್ತೆ ಮಾತ್ರವಲ್ಲದೆ ಒಳಗಿನ ರಸ್ತೆಗಳೂ ಸಹ ಹಾಳಾಗಿದ್ದು, ಅವುಗಳನ್ನು ಸರಿಪಡಿಸುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.
ಪೌರಾಯುಕ್ತರಾದ ರಾಮದಾಸ್, ಕಾರ್ಯಪಾಲಕ ಎಂಜಿನಿಯರ್ ಶಿವಾನಂದ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ ಕುಮಾರ್, ಕಿರಿಯ ಎಂಜಿನಿಯರ್ ವನಿತಾ, ಪ್ರಮುಖರಾದ ಪಿ.ಡಿ.ಪೊನ್ನಪ್ಪ, ಟಿ.ಎಸ್.ಪ್ರಕಾಶ್, ಅನಿತಾ ಪೂವಯ್ಯ, ಪ್ರಕಾಶ್ ಆಚಾರ್ಯ, ಮನು ಮಂಜುನಾಥ್, ಬಿ.ಕೆ.ಜಗದೀಶ್, ಸವಿತಾ ರಾಕೇಶ್, ಪ್ರೇಮ ರಾಘವಯ್ಯ ಇತರರು ಇದ್ದರು.
ಶಾಲೆ ಸದ್ಯ ಆರಂಭಿಸುವುದು ಬೇಡ: ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಶಾಲೆಗಳನ್ನು ಆರಂಭಿಸಬಾರದು ಎಂದು ಅವರು ಮನವಿ ಮಾಡಿದರು.

ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು, ಅಂತರ ಕಾಯ್ದುಕೊಳ್ಳಬೇಕು. 130 ಕೋಟಿ ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಸಾಲದು ಎಂದು ಅಪ್ಪಚ್ಚುರಂಜನ್ ಅವರು ತಿಳಿಸಿದರು.
ಶಾಲೆ ಆರಂಭ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಮಕ್ಕಳ ಜೀವ ಮತ್ತು ಜೀವನ ಅತೀ ಮುಖ್ಯ. ನಂತರ ಶಿಕ್ಷಣ. ಆ ನಿಟ್ಟಿನಲ್ಲಿ ಯೋಚಿಸಬೇಕಿದೆ ಎಂದು ಶಾಸಕರು ಸಲಹೆ ಮಾಡಿದರು.
ಪ್ರತಿಯೊಬ್ಬ ಪ್ರವಾಸಿಗರು ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್ ಪರೀಕ್ಷೆ ಮಾಡಿಸಿಕೊಂಡವರಿಗೆ ಮಾತ್ರ ಹೋಂ ಸ್ಟೇ ಮತ್ತು ರೆಸಾರ್ಟ್‍ಗಳಲ್ಲಿ ಅವಕಾಶ ನೀಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಕೋವಿಡ್-19 ನಿಯಂತ್ರಿಸಲು ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಮುನ್ನೆಚ್ಚರಿಕೆ ವಹಿಸಬೇಕಿದೆ. ಮುಂದಿನ ದಿನಗಳಲ್ಲಿ ಚೆಕ್ ಪೋಸ್ಟ್‍ಗಳಲ್ಲಿ ಕೋವಿಡ್ ತಪಾಸಣೆ ಕೈಗೊಳ್ಳುವ ಸಂಬಂಧ ಚಿಂತಿಸಲಾಗುವುದು. ದಸರಾವನ್ನು ತುಂಬಾ ಸರಳವಾಗಿ ಆಚರಿಸಬೇಕಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದರು. ಇದೇ ಸಂದರ್ಭದಲ್ಲಿ ಶಾಸಕರಾದ ಅಪ್ಪಚ್ಚುರಂಜನ್ ಅವರು ಗೂಡ್ಸ್ ಆಟೋ ಚಾಲಕರಿಗೆ ಮುಖಗವಸು ವಿತರಿಸಿದರು.