ಮೀನು ದರ ಸಮರ : ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಕರವೇ

13/10/2020

ಮಡಿಕೇರಿ ಅ.13 : ವಿರಾಜಪೇಟೆ ಮಾರುಕಟ್ಟೆಯಲ್ಲಿ ಅಧಿಕ ದರಕ್ಕೆ ಮೀನು ಮಾರಾಟ ಮಾಡುತ್ತಿರುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣ ಆಡಳಿತ ವ್ಯವಸ್ಥೆಯ ಗಮನ ಸೆಳೆದ ಬೆನ್ನಲ್ಲೇ ಕೆಲವು ಕಿಡಿಗೇಡಿಗಳು ನಮ್ಮ ವಿರುದ್ಧ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ರಕ್ಷಣಾ ವೇದಿಕೆಯ ವಿರಾಜಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ವಿ.ಅನಿಲ್ ಕುಮಾರ್, ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ವಿರಾಜಪೇಟೆ ಮೀನು ಮಾರುಕಟ್ಟೆಯಲ್ಲಿ ಹಸಿಮೀನು ವ್ಯಾಪಾರ ದೊಡ್ಡ ದಂಧೆಯಾಗಿ ಮಾರ್ಪಟ್ಟಿದ್ದು, ಮೀನಿನ ದುಬಾರಿ ದರಕ್ಕೆ ಕಡಿವಾಣ ಹಾಕಬೇಕೆಂದು ಸಂಘಟನೆಯ ಪರವಾಗಿ ಹೇಳಿಕೆ ನೀಡಲಾಗಿತ್ತು. ಆದರೆ ಸಂಘಟನೆಯ ಏಳಿಗೆ ಸಹಿಸದ ಕೆಲವರು ಇದೊಂದು ಬ್ಲ್ಯಾಕ್ ಮೇಲ್ ತಂತ್ರ ಎಂದು ಇಲ್ಲಸಲ್ಲದ ಆರೋಪ ಮಾಡಿದ್ದು, ಕಿಡಿಗೇಡಿಗಳು ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದವರ ವಿರುದ್ಧ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪೊಲೀಸರು ಸಂಬಂಧಪಟ್ಟ ವ್ಯಕ್ತಿಗಳನ್ನು ಕರೆಸಿ, ಸಂಘಟನೆಯ ತಕರಾರಿಗೆ ಹೋಗದಂತೆ ಎಚ್ಚರಿಕೆಯನ್ನು ಸಹ ನೀಡಿದ್ದರು ಎಂದು ಅನಿಲ್ ಕುಮಾರ್ ಹೇಳಿದರು.
ವೇದಿಕೆಯ ಕಾನೂನು ಸಲಹೆಗಾರ ರಫೀಕ್ ನವಲಗುಂದ ಮಾತನಾಡಿ, ಜನರ ಹಿತಕ್ಕಾಗಿ ಶ್ರಮಿಸುತ್ತಿದ್ದ ಸಂಘಟನೆಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಅಕ್ಷಮ್ಯ ಅಪರಾಧವಾಗಿದೆ. ಆರೋಪ ಮಾಡಿದವರು ಬೇಷರತ್ತಾಗಿ ಕ್ಷಮೆಯಾಚಿಸದಿದ್ದರೆ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಲೀಲಾ ಶೇಷಮ್ಮ ಮಾತನಾಡಿ, ಕರವೇ ಅಧ್ಯಕ್ಷರ ವಿರುದ್ಧ ಆರೋಪ ಮಾಡಿರುವವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ವಿರಾಜಪೇಟೆ ತಾಲ್ಲೂಕು ಕಾರ್ಯದರ್ಶಿ ಅವಿನಾಶ್ ರವೀಂದ್ರ, ಖಜಾಂಚಿ ತಫ್ರಿಜ್ ಹಾಗೂ ಹೋಬಳಿ ಅಧ್ಯಕ್ಷ ಜುನೈದ್ ಉಪಸ್ಥಿತರಿದ್ದರು.