ಡ್ರಗ್ಸ್ ದಂಧೆ : ಅಯ್ಯಂಗೇರಿ ವ್ಯಕ್ತಿಯ ಬಂಧನ

October 16, 2020

ಮಡಿಕೇರಿ ಅ.16 : ನಿಷೇಧಿತ ಆಮ್ಟಿಮೈನ್ ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಮಡಿಕೇರಿ ತಾಲೂಕು ಅಯ್ಯಂಗೇರಿ ನಿವಾಸಿ ಪ್ರಸ್ತುತ ಮಂಗಳೂರು ನಾಟಕಲ್ ದೇರಳಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಟಿ.ಇ ಮುಸ್ತಫ(34) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಸೆ.28ರಂದು ರಾತ್ರಿ ಮಡಿಕೇರಿ ನಗರ ವ್ಯಾಪ್ತಿಯ ರಾಜಾಸೀಟ್ ಮುಖ್ಯ ರಸ್ತೆಯಲ್ಲಿ ಸುಮಾರು 9 ಲಕ್ಷ ರೂ. ಮೌಲ್ಯದ 300ಗ್ರಾಂ. ಮಾದಕ ವಸ್ತು ಆಮ್ಟಿಮೈನ್ ಸಾಗಾಟ ಪ್ರಕರಣವನ್ನು ಡಿಸಿಐಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಪತ್ತೆ ಹಚ್ಚಿ ಸ್ಥಳದಲ್ಲೇ ಒಂದು ಕಾರು ಸಹಿತ 3 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಸ್ಟ್ ಆಫ್ರಿಕಾದ ಘನಾ ದೇಶದ ವಿದೇಶಿ ಪ್ರಜೆ ಸೇರಿದಂತೆ ಒಟ್ಟು 7 ಜನ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಈ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ ಅಯ್ಯಂಗೇರಿ ಗ್ರಾಮದ ಮುಸ್ತಾಫ ಮಾತ್ರ ತಲೆ ಮರೆಸಿಕೊಂಡಿದ್ದ. ಇಂದು ಈತನನ್ನು ಮಂಗಳೂರಿನ ದೇರಳಕಟ್ಟೆಯಲ್ಲಿ ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮಾರ್ಗದರ್ಶನದಲ್ಲಿ ಡಿಸಿಐಬಿ ವೃತ್ತ ನಿರೀಕ್ಷಕ ಎನ್.ಕುಮಾರ್ ಆರಾಧ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಎಎಸ್‍ಐ ಹಮೀದ್, ಸಿಬ್ಬಂದಿಗಳಾದ ಬಿ.ಎಲ್. ಯೊಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಆರ್.ವಸಂತ, ಬಿ.ಜೆ ಶರತ್ ರೈ, ಎ.ಆರ್.ಸುರೇಶ್, ವಿ.ಜಿ ವೆಂಕಟೇಶ್, ಕೆ.ಎಸ್.ಅನಿಲ್ ಕುಮಾರ್, ಚಾಲಕ ಕೆ.ಎಸ್.ಶಶಿಕುಮಾರ್ ಮತ್ತು ಸಿಡಿಆರ್ ಸೆಲ್‍ನ ರಾಜೇಶ್ ಹಾಗೂ ಗಿರೀಶ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕೊಡಗು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ ಹಾಗೂ ಬಳಕೆಯ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಗುಪ್ತ ಮಾಹಿತಿ ನೀಡಿ ಮಾದಕ ದಂಧೆಗೆ ಕಡಿವಾಣ ಹಾಕಲು ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮನವಿ ಮಾಡಿದ್ದಾರೆ.

error: Content is protected !!