ಜೆಡಿಎಸ್ ರೈತ ಯುವ ಘಟಕದಿಂದ ವಿಧಾನಸೌಧ ಚಲೋ ಹೋರಾಟ

16/10/2020

ಮಡಿಕೇರಿ ಅ.16 : ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜಾತ್ಯಾತೀತ ಜನತಾ ದಳದ ವತಿಯಿಂದ ಸಧ್ಯದಲ್ಲಿಯೇ ವಿಧಾನಸೌಧ ಚಲೋ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಜೆಡಿಎಸ್ ರೈತ ಯುವ ಘಟಕದ ರಾಜ್ಯಾಧ್ಯಕ್ಷೆ ಚೈತ್ರ ಗೌಡ ತಿಳಿಸಿದ್ದಾರೆ.
ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ನಾಯಕರು ಟೀಕೆ ಟಿಪ್ಪಣಿ ಮಾಡುತ್ತಿದ್ದರು. ಆದರೆ ಪ್ರಸ್ತುತ ಎರಡೂ ಕಡೆ ಅವರದ್ದೇ ಆಡಳಿವಿದ್ದರೂ ಜನಪರ ಕಾಳಜಿ ತೋರುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೊಡಗಿನ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದನೆ ದೊರೆಯುತ್ತಿತ್ತು. ಮಳೆಹಾನಿ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ತನ್ನ ಆಡಳಿತ ರಾಜ್ಯದಲ್ಲಿದೆ ಎನ್ನುವುದನ್ನೇ ಮರೆತಂತ್ತಿದೆ ಎಂದು ಟೀಕಿಸಿದರು.
ಕೊಡಗಿನಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಕೊಡವರಿಗೆ ಹೆರಿಟೆಜ್ ಹೋಂ ನೀಡಲು ಸಾಧ್ಯವಾಗದ ಶಾಸಕರಿಗೆ ಬೇರೇನು ಮಾಡಲು ಸಾಧ್ಯವೆಂದು ಪ್ರಶ್ನಿಸಿರುವ ಅವರು, ಗ್ರಾಮಾಂತರ ಪ್ರದೇಶದ ರಸ್ತೆಗಳು ಹೀನಾಯ ಸ್ಥಿತಿಯಲ್ಲಿವೆ ಎಂದರು.
ದೇಶವ್ಯಾಪಿ ಹರಡಿರುವ ಕೊರೋನಾದಿಂದ ಜನಸಾಮಾನ್ಯರು ಸಾವು ನೋವಿನೊಂದಿಗೆ ಹೋರಾಡುತ್ತಿದ್ದಾರೆ. ಮಾಸ್ಕ್ ಧರಿಸದೇ ಇರುವವರಿಗೆ 500, 1000 ದಂಡ ವಿಧಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಚೈತ್ರ ಗೌಡ ಆರೋಪಿಸಿದರು.
ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಕೊಡಗಿನ ಇಬ್ಬರು ಶಾಸಕರು ಆಡಳಿತ ಪಕ್ಷದವರಾಗಿದ್ದರೂ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದಾಗಿದೆ. ಚುನಾವಣೆ ಸಂದರ್ಭ ಮಾತ್ರ ಶಂಕುಸ್ಥಾಪನೆ ಮಾಡುವ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೊಡಗಿನವರೇ ಆದ ಇಬ್ಬರು ಶಾಸಕರಿಗೆ ಕೊಡವರ ಮತ ಬೇಕು, ಆದರೆ ಕೊಡವರ ಹೆರಿಟೇಜ್ ಕಾಮಗಾರಿಯನ್ನು ಪೂರ್ಣಗೊಳಿಸಲು ಇನ್ನೂ ಸಾಧ್ಯವಾಗಿಲ್ಲ. ಕೊಡಗಿನ ಉಸ್ತುವಾರಿಗಳೇ ವಸತಿ ಸಚಿವರಾಗಿದ್ದರೂ ಪ್ರಾಕೃತಿಕ ವಿಕೋಪ ಸಂದರ್ಭ ಸಂತ್ರಸ್ತರಾದವರಿಗೆ ಮನೆಯನ್ನು ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ.
ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ನವೆಂಬರ್ ತಿಂಗಳಿನಲ್ಲಿ ಮಡಿಕೇರಿ ನಗರದ ಗಾಂಧಿ ಪ್ರತಿಮೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್‍ಖಾನ್, ಖಜಾಂಚಿ ಡೆನ್ನಿ ಬರೋಸ್, ಜಿಲ್ಲಾ ಕಾರ್ಯದರ್ಶಿ ಎನ್.ಸಿ.ಸುನಿಲ್, ಸಂಘಟನಾ ಕಾರ್ಯದರ್ಶಿ ಗಣೇಶ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ಮಹಿಳಾ ಘಟಕದ ನಗರಾಧ್ಯಕ್ಷೆ ಸುನಂದ, ನಗರ ಎಸ್‍ಸಿ ಘಟಕದ ಅಧ್ಯಕ್ಷ ರವಿಕುಮಾರ್, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಮತ್ತಿತರರು ಹಾಜರಿದ್ದರು.