ಸೋಮವಾರಪೇಟೆಯಲ್ಲಿ ಪೊಲೀಸ್ ಇಲಾಖೆಯಿಂದ ಕೋವಿಡ್ ಜಾಗೃತಿ ಕಾರ್ಯಕ್ರಮ

17/10/2020

ಸೋಮವಾರಪೇಟೆ ಅ. 17 : ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಕೋವಿಡ್ ಸೋಂಕಿನ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳುವ ಕುರಿತು ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ನಡೆಯಿತು.
ಸಿಪಿಐ ಮಹೇಶ್ ಮಾತನಾಡಿ, ಕೊರೊನಾ ವೈರಸ್ ದೇಶದಲ್ಲಿ ಹೆಚ್ಚಾಗಿ ಹರಡುತ್ತಿರುವುದರಿಂದ, ಅದನ್ನು ನಿಯಂತ್ರಿಸಲು ಸಾರ್ವಜನಿಕರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿತಾಣಗಳಿಗೆ ಪ್ರವಾಸಿಗರು ತೆರಳುವಂತಿಲ್ಲ ಎಂದರು.
ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂತ್ರಾಲಯದ ಆದೇಶದನ್ವಯ ಜಿಲ್ಲೆಯ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.
ಎಲ್ಲಾ ರೆಸಾರ್ಟ್, ಹೋಮ್‍ಸ್ಟೇ ಮತ್ತು ಹೋಟೇಲ್‍ಗಳಲ್ಲಿ ಸ್ಟಾಂಡ್ ಸ್ಯಾನಿಟೈಸರ್ ಬಳಸಬೇಕು. ಸಿಬ್ಬಂದಿಗಳು ಹಾಗೂ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಬಳಸಬೇಕು. ಕನಿಷ್ಟ 6 ಅಡಿಗಳ ಅಂತರ ಕಾಯ್ದುಕೊಳ್ಳಬೇಕು, ಸಾಧ್ಯವಾದಷ್ಟು ಇ-ಪೇಮೆಂಟ್ ಮೂಲಕ ವ್ಯವಹಾರ ನಡೆಸಬೇಕು, ಪ್ರವಾಸಿಗರು ಆಗಮಿಸಿದ ತಕ್ಷಣ ಉಷ್ಣತೆ ಪರೀಕ್ಷೆ ನಡೆಸಬೇಕು ಎಂದರು.
ಹೋಟೆಲ್ ಮತ್ತು ರೆಸಾರ್ಟ್‍ಗಳಲ್ಲಿ ಪ್ರವಾಸಿಗರು ಮತ್ತು ಅತಿಥಿಗಳಿಂದ ಪ್ರಯಾಣ ಹಿನ್ನೆಲೆಯ ಮಾಹಿತಿ ಮತ್ತು ಅವರ ದಾಖಲೆಯನ್ನು ಪಡೆಯಬೇಕು. ಅವರ ಲಗೇಜುಗಳ ಸ್ಯಾನಿಟೈಜರ್ ಮಾಡಬೇಕು. ಒಂಡು ಕೊಠಡಿಯಲ್ಲಿ ಗರೀಷ್ಠ ಇಬ್ಬರು ಅತಿಥಿಗಳಿಗೆ ಮಾತ್ರ ವಾಸ್ತವ್ಯ ಹೂಡಲು ಅವಕಾಶ ನೀಡಬೇಕು. ನಾಲ್ಕು ಮಂದಿಗಿಂತ ಹೆಚ್ಚಿನ ಜನರು ಸೇರುವುದಕ್ಕೆ ಬಿಡಬಾರದು. ಊಟದ ಟೇಬಲ್‍ನಲ್ಲಿ ಗರೀಷ್ಠ ನಾಲ್ಕು ಜನರು ಕುಳಿತುಕೊಳ್ಳಲು ಅವಕಾಶ ಹಾಗೂ ಹಿರಿಯ ನಾಗರಿಕರು, ಗರ್ಭೀಣಿಯರು ಮತ್ತು ಮಕ್ಕಳಿಗೆ ನಾಡಿ ಮಿಡಿತದ ಮೂಲಕ ಪರೀಕ್ಷೆ ನಡೆಸಬೇಕೆಂದರು.
ರೆಸಾರ್ಟ್ ಮತ್ತು ಹೋಮ್ ಸ್ಟೇಗಳಲ್ಲಿ ರಾತ್ರಿ ಸಮಯದಲ್ಲಿ ಯಾವುದೇ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಬಾರದು. ಯಾವುದೇ ಅತಿಥಿಗಳ ಬಗ್ಗೆ ಸಂಶಯ ಬಂದಲ್ಲಿ ಕೂಡಲೇ ಸಮೀಪದ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಅಂತಹ ಯಾವುದೇ ಯಾವುದಾದರೂ ಅನಾಹುತ ಸಂಭವಿಸಿದಲ್ಲಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ರೆಸಾರ್ಟ್ ಮತ್ತು ಹೋಮ್‍ಸ್ಟೇಗಳ ಮಾಲೀಕರು ಇದ್ದರು.