ಹೈನುಗಾರಿಕೆ ತರಬೇತಿ ಕಾರ್ಯಾಗಾರ : ವೈಜ್ಞಾನಿಕ ಪದ್ಧತಿಯಿಂದ ಸ್ವಾವಲಂಬಿ ಬದುಕು ಸಾಗಿಸಿ : ಬೋಧ ಸ್ವರೂಪಾನಂದ ಸ್ವಾಮೀಜಿ ಸಲಹೆ

ಮಡಿಕೇರಿ ಅ.19 : ಹೈನುಗಾರಿಕೆ ಸೇರಿದಂತೆ ಎಲ್ಲಾ ಕಾರ್ಯ ಕ್ಷೇತ್ರಗಳಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸುವ ಮೂಲಕ ಆರ್ಥಿಕವಾಗಿ ಪ್ರಗತಿ ಸಾಧಿಸಿ ಸ್ವಾವಲಂಬಿ ಬದುಕು ಸಾಗಿಸುವಂತೆ ಪೆÇನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದ ಮುಖ್ಯಸ್ಥ ಶ್ರೀಬೋಧ ಸ್ವರೂಪಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಮತ್ತು ಕಾವೇರಿ ಹಾಲು ಉತ್ಪಾದಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಇಂದು ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ನಡೆದ ವೈಜ್ಞಾನಿಕ ಹೈನುಗಾರಿಕೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.
ದೇಶದ ಕೃಷಿಕರು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ದುರಾದೃಷ್ಟಕರ. ಕೃಷಿ ಫಸಲಿನಲ್ಲಿ ಲಾಭ ಕಾಣದೆ ನಷ್ಟ ಅನುಭವಿಸಿದಾಗ ಧೃತಿಗೆಡದೆ ಪರಿಸ್ಥಿತಿಯನ್ನು ನಿಭಾಯಿಸುವ ಜಾಣತನ ತೋರಬೇಕು ಎಂದು ಹೇಳಿದರು.
ಭಾರತದಲ್ಲಿ ಸಾಂಪ್ರದಾಯಿಕ ಹೈನುಗಾರಿಕೆಯೂ ಪ್ರಮುಖ ಉದ್ಯಮವಾಗಿದೆ. ಹಸುಗಳ ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ರೈತಾಪಿ ವರ್ಗ ಅಳವಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ದಕ್ಷಿಣ ಕೊಡಗು ಈ ಹಿಂದೆ ಹೈನುಗಾರಿಕೆಗೆ ಪ್ರಸಿದ್ಧವಾಗಿತ್ತು. ಕೊಡಗಿನ ಕೃಷಿಕರು ಸಂಕಷ್ಟದಲ್ಲಿರುವ ಇಂದಿನ ದಿನಗಳಲ್ಲಿ ಹೈನುಗಾರಿಕೆ ಲಾಭದಾಯಕವಾಗಿದೆ. ಜನಜೀವನ ಅಭಿವೃದ್ಧಿಯ ದೃಷ್ಟಿಯಲ್ಲಿ ಮನೆ ಬಾಗಿಲಿನಲ್ಲಿಯೇ ಹಾಲು ಸಂಗ್ರಹ, ವಿತರಣೆಗೆ ಅವಕಾಶ ಸಿಗಬೇಕು. ಕೇವಲ ಕಷ್ಟದಿಂದ ದುಡಿದರೆ ಸಾಲದು ಜ್ಞಾನದ ಮೂಲಕ ಲಾಭದಾಯಕವಾಗಿ ಉದ್ದಿಮೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಉದ್ಯಮಿ ಕೇಶವ್ ಕಾಮತ್ ಅವರು ಮಾತನಾಡಿ, ಹಾಲು ಉತ್ಪಾದಕರ ಒಕ್ಕೂಟ ಸ್ಥಾಪನೆ ಮೂಲಕ ಮತ್ತೆ ಪೆÇನ್ನಂಪೇಟೆ ಘಟಕಕ್ಕೆ ಜೀವ ತುಂಬಬೇಕು. ಹೆಚ್ಚು ಹಾಲು ಉತ್ಪಾದನೆಗೊಂಡಲ್ಲಿ ಮೈಸೂರು ಹಾಗೂ ಹಾಸನಕ್ಕೂ ಸರಬರಾಜು ಮಾಡಲು ಅವಕಾಶವಿದೆ. ಹಾಲು, ತುಪ್ಪ, ಮೊಸರು ಇತ್ಯಾದಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇದ್ದು, ಬ್ಯಾಂಕ್‍ನಿಂದ ಸಿಗುವ ಸಾಲ, ಸಬ್ಸಿಡಿಯನ್ನು ಬಳಸಿಕೊಂಡಲ್ಲಿ ಲಾಭದಾಯಕ ಉದ್ಯಮ ಸ್ಥಾಪನೆಗೆ ಅವಕಾಶವಿದೆ ಎಂದು ಹೇಳಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ, ವಿಷಯ ತಜ್ಞರಾದ ಕೆ.ಎ.ದೇವಯ್ಯ ಮಾತನಾಡಿ ವಿಶ್ವದಲ್ಲಿ ಹಾಲು ಉತ್ಪಾದನೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ವಿದೇಶದಲ್ಲಿ ಕೆಲವೇ ಉದ್ಯಮಿಗಳು ಡೈರಿ ಫಾರಂ ಮೂಲಕ ಹೆಚ್ಚು ಹಾಲು ಉತ್ಪಾದಿಸಿದರೆ, ಭಾರತದಲ್ಲಿ ಪ್ರತಿಯೊಬ್ಬ ರೈತನೂ ಹಾಲು ಉತ್ಪಾದನೆ ಮೂಲಕ ಉಪ ಕಸುಬು ಮಾಡಿಕೊಳ್ಳಬಹುದು. ಕೇವಲ ಕಾಫಿ ಕೃಷಿಯನ್ನೇ ಅವಲಂಬಿಸುವುದು ಸರಿಯಲ್ಲವೆಂದರು.
ಹಸು ಸಾಕಾಣೆ, ಹಂದಿ ಸಾಕಣೆ, ಅಣಬೆ ಇತ್ಯಾದಿ ಪರ್ಯಾಯ ವ್ಯವಸಾಯ ಪದ್ಧತಿಗಳ ಮೂಲಕ ದಿನನಿತ್ಯ ಲಾಭದಾಯಕ ವಹಿವಾಟು ಮಾಡಬಹುದಾಗಿದೆ ಎಂದು ತಿಳಿಸಿದರು.
ವೈಜ್ಞಾನಿಕ ಹೈನುಗಾರಿಕೆ ಕುರಿತು ಮಾತನಾಡಿದ ಡಾ.ಸುರೇಶ್ ಫಲಾನುಭವಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಕಾವೇರಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷ ಮುರುವಂಡ ಕಸ್ತೂರಿ ಸುಬ್ಬಯ್ಯ ಉಪಸ್ಥಿತರಿದ್ದರು. ನಬಾರ್ಡ್ ಸಂಪನ್ಮೂಲ ವ್ಯಕ್ತಿ ತುಷಾರ್ ಕುಲಕರ್ಣಿ ಅವರು ಸ್ವಾಗತಿಸಿ, ಚಂದನ್ ಕಾಮತ್ ನಿರೂಪಿಸಿ, ವಂದಿಸಿದರು.
ವಿ.ಬಿ.ನೂತನ್ ಹಾಗೂ ಶಬರೀಶ್ ಕಾರ್ಯಾಗಾರದ ಉಸ್ತುವಾರಿ ವಹಿಸಿದ್ದರು.

