ಪೊಲೀಸ್ ಹುತಾತ್ಮರ ದಿನಾಚರಣೆ : ಕೊಡಗು ಪೊಲೀಸರಿಂದ ಹುತಾತ್ಮರಿಗೆ ಗೌರವ ಸಮರ್ಪಣೆ

October 21, 2020

ಮಡಿಕೇರಿ ಅ. 21 : ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಬಲಿಯಾದ ಪೊಲೀಸ್ ಹುತಾತ್ಮರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಉಪ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಜಯ ಕುಮಾರ್, ಶೈಲೇಂದ್ರ, ಜಿಲ್ಲಾ ಶಸಸ್ತ್ರ ಪಡೆಯ ಎಸ್.ರಾಚಯ್ಯ, ಮಡಿಕೇರಿ ಗ್ರಾಮಾಂತರ ಠಾಣೆಯ ದಿವಾಕರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಮಾತನಾಡಿ ಹುತಾತ್ಮರಾದ ಪೊಲೀಸರಿಗೆ ಗೌರವ ಸಲ್ಲಿಸುವ ದಿನ ಇದಾಗಿದೆ. ಪ್ರತಿ ವರ್ಷವು ಈ ದಿನವನ್ನು ಅತ್ಯಂತ ಗೌರವ ಪೂರ್ವಕವಾಗಿ ಆಚರಿಸಲಾಗುತ್ತದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಶೌರ್ಯದಿಂದ ಹೋರಾಡಿ ಹುತಾತ್ಮರಾಗಿದ್ದಾರೆ ಎಂದರು.
ಕಳೆದ ವರ್ಷ ಕರ್ತವ್ಯ ನಿರ್ವಹಿಸುವಾಗ ದೇಶದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಪೇದೆಗಳ ವಿವರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಓದಿದರು.
ಅಕ್ಟೋಬರ್ 21 ಪೊಲೀಸರ ಶೌರ್ಯ ಸಾಹಸವನ್ನು ಸ್ಮರಿಸುವ ದಿನವಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದೇಶ ಹಾಗೂ ಸಮಾಜದ ರಕ್ಷಣೆ ಸಂದರ್ಭದಲ್ಲಿ ದೇಶದಲ್ಲಿ 264 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದರು.
ಜಿಲ್ಲಾ ಶಸಸ್ತ್ರ ಪಡೆಯ ಎಸ್.ರಾಚಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಅರ್ಪಿಸಲಾಯಿತು. ಸಿದ್ದೇಶ್ ಅವರ ನೇತೃತ್ವದ ಪೊಲೀಸ್ ವಾದ್ಯ ತಂಡದವರು ರಾಷ್ಟ್ರಗೀತೆ ಹಾಡಿದರು. ಅಂತೋಣಿ ಡಿಸೋಜ ನಿರೂಪಿಸಿದರು, ಉಪ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ವಂದಿಸಿದರು.