ಲಾಕ್ ಡೌನ್ ಸಂಕಷ್ಟ : ಸಮಾನ ಸೌಲಭ್ಯ ನೀಡಲು ಕೊಡಗು ಸಿಪಿಐಎಂ ಒತ್ತಾಯ

ಮಡಿಕೇರಿ ಮೇ 7 : ಕೊರೋನಾ ಲಾಕ್‍ಡೌನ್‍ನಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರು, ಸಣ್ಣ, ಮಧ್ಯಮ ರೈತರು, ಸಣ್ಣ ವ್ಯಾಪಾರಿಗಳು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ಸರ್ಕಾರ ಎಪಿಎಲ್, ಬಿಪಿಎಲ್ ತಾರತಮ್ಯ ತೋರದೆ ಪ್ರತಿ ಕುಟುಂಬಕ್ಕೆ ಮಾಸಿಕ ತಲಾ 35 ಕೆ.ಜಿ ಅಕ್ಕಿ ಹಾಗೂ ರಿಯಾಯಿತಿ ದರದಲ್ಲಿ ನಿತ್ಯೋಪಯೋಗಿ ವಸ್ತುಗಳನ್ನು ಒದಗಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಇ.ರ.ದುರ್ಗಾಪ್ರಸಾದ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅಸಡ್ಡೆಯಿಂದ ಕೊರೋನಾ ಸೋಂಕು ಭಾರತದಲ್ಲೂ ವ್ಯಾಪಿಸಿದೆ ಎಂದು ಆರೋಪಿಸಿದರು.
ನಿರಂತರ ಲಾಕ್ ಡೌನ್ ನಿಂದ ಕೃಷಿ ಕೂಲಿಗಾರರು, ಬುಡಕಟ್ಟು ಜನರು, ತೋಟ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲಿ ಕೆಲಸ ಮಾಡುವವರು, ಮೋಟರ್ ರಂಗದಲ್ಲಿ ಕೆಲಸ ಮಾಡುವವರು, ಆಟೋ ರೀಕ್ಷಾ ಓಡಿಸುವವರು, ಕಾರ್ ಚಾಲಕರು, ಅಗಸರು, ದರ್ಜಿಗಳು, ಕ್ಷೌರಿಕರು, ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸ ಮಾಡುವವರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ರೈತರು ಬೆಳೆದ ಬೆಳೆಯನ್ನು ಕೊಯ್ದು ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗದೆ ಅನೇಕರ ಬೆಳೆ ನಾಶವಾಗಿ ಹೋಗಿದೆ.
ಸಣ್ಣ, ಮಧ್ಯಮ ಉದ್ದಿಮೆದಾರರು, ಹೊಟೇಲ್, ವರ್ಕ್‍ಶಾಪ್ ನೌಕರರು, ವ್ಯಾಪಾರಿಗಳು ವ್ಯಾಪಾರವಿಲ್ಲದೆ ಸಾಲವನ್ನು ಮರುಪಾವತಿಸಲಾಗದೆ ಪರದಾಡುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳ ಕಾರ್ಮಿಕರ ನೆರವಿಗೆ ಬರುವುದು ಸರ್ಕಾರದ ಕರ್ತವ್ಯವಾಗಿರುವುದರಿಂದ ಪ್ರತಿ ಕುಂಟುಂಬಕ್ಕೆ 7,500 ರೂ. ಸಹಾಯಧನ ನೀಡಬೇಕು ಎಂದು ದುರ್ಗಾಪ್ರಸಾದ್ ಒತ್ತಾಯಿಸಿದರು.
ಕಟಾವಿಗೆ ಬಂದ ಬೆಳೆಯನ್ನು ರೈತರಿಂದ ನ್ಯಾಯಯುತ ಬೆಲೆಗೆ ಖರೀದಿಸಿ ಮಾರುಕಟ್ಟೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು, ನ್ಯಾಯಬೆಲೆ ಅಂಗಡಿಗಳ ಮೂಲಕ ಗ್ರಾಹಕರಿಗೆ ಹಂಚಬೇಕು, ಸಣ್ಣ, ಮಧ್ಯಮ ಬೆಳೆಗಾರರ, ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು, ಸುಲಭದ ಕಂತಿನಲ್ಲಿ ಬಡ್ಡಿ ರಹಿತ ಹೊಸ ಸಾಲ ನೀಡಬೇಕು, ಕರಿಮೆಣಸು ಆಮದನ್ನು ತಡೆಯುವಂತೆ ಕೇಂದ್ರ ಸರಕಾರವನ್ನು ಪ್ರೇರೇಪಿಸಬೇಕು, ರಸ ಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ರದ್ದು ಮಾಡಿದ್ದು, ಈ ಕ್ರಮವನ್ನು ಹಿಂದಕ್ಕೆ ಪಡೆಯಬೇಕು, ಮನೆ ಬಾಡಿಗೆಗೆ ಮಾಲೀಕರು ಒತ್ತಡ ಹೇರದಂತೆ ನೋಡಿಕೊಳ್ಳಬೇಕು, ಕಾರ್ಮಿಕರ ವೇತನ ಕಡಿತ ಮಾಡಬಾರದು, ಮೈಕ್ರೋ ಫೈನಾನ್ಸ್ ಕಂಪೆನಿಗಳಲ್ಲಿ ಬಡವರು ಮಾಡಿರುವ ಸಾಲವನ್ನು ಮನ್ನಾ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ದುರ್ಗಾಪ್ರಸಾದ್ ಒತ್ತಾಯಿಸಿದರು.