ಉದ್ಯಾನವನಕ್ಕೆ ಹುತಾತ್ಮ ಅಧಿಕಾರಿಗಳ ಹೆಸರಿಡಿ : ನಿವೃತ್ತ ಎಸ್‍ಪಿ ಮುದ್ದಯ್ಯ ಒತ್ತಾಯ

31/10/2020

ಮಡಿಕೇರಿ ಅ.31 : ಮಡಿಕೇರಿ ನಗರದ ಸ್ವಾಗತ ಬೆಟ್ಟವೆಂದೇ ಹೆಸರುವಾಸಿಯಾಗಿರುವ ಕರ್ಣಂಗೇರಿ ಬೆಟ್ಟದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಉದ್ಯಾನವನಕ್ಕೆ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರ ಹೆಸರು ಇಡುವ ಬದಲು ಕಾಡುಗಳ್ಳ ವೀರಪ್ಪನ್ ಗುಂಡಿಗೆ ಬಲಿಯಾಗಿ ಹುತಾತ್ಮರಾದ ಆರು ಪೊಲೀಸ್ ಅಧಿಕಾರಿಗಳ ಹೆಸರಿಡುವಂತೆ ಏಳ್‍ನಾಡ್ ಕೊಡವ ಸಂಘದ ಸ್ಥಾಪಕಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಉದಿಯಂಡ ಎಂ.ಮುದ್ದಯ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅರಣ್ಯ ಬೆಳೆಸಿ ಪೋಷಿಸುವಲ್ಲಿ ಉತ್ತಮ ಸೇವೆಗೈದಿರುವ ಸಾಲುಮರದ ತಿಮ್ಮಕ್ಕ ಅವರ ಹೆಸರಿಡಲು ಸರ್ಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ. ಆದರೆ ಈಗಾಗಲೇ ರಾಜ್ಯದ ಹಲವಾರು ಸ್ಥಳಗಳಿಗೆ ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ಗುರುತಿಸಿ ಹೆಸರಿಡಲಾಗಿದೆ. ಸೇನಾನಾಡು ಕೊಡಗಿನಲ್ಲಿ ಅನೇಕ ವೀರಯೋಧರ ಪ್ರತಿಮೆಗಳಿದ್ದು, ಅದರಂತೆ ಪ್ರಕೃತಿಗಾಗಿ ಪ್ರಾಣ ನೀಡಿದ ಪೊಲೀಸ್ ಅಧಿಕಾರಿಗಳ ಹೆಸರನ್ನು ಉದ್ಯಾನವನಕ್ಕೆ ಇಟ್ಟಲ್ಲಿ ಅರ್ಥಗರ್ಭಿತವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಕಾಡುಗಳ್ಳ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಅಂದಿನ ಎಸ್‍ಪಿ ಗೋಪಾಲ ಹೊಸೂರು ನೇತೃತ್ವದ ತಂಡದ ಮೇಲೆ ಬಾಂಬ್ ಸಹಿತ ಮನಬಂದಂತೆ ಗುಂಡು ಹಾರಿಸಲಾಯಿತು. ಪರಿಣಾಮ ಮೈಸೂರಿನ 5ನೇ ಕೆಎಸ್‍ಆರ್‍ಪಿ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ಅಧಿಕಾರಿಗಳಾದ ಉತ್ತಪ್ಪ, ಸ್ವಾಮಿ, ನರಸಪ್ಪ, ಪ್ರಭಾಕರ, ಮಾಚಯ್ಯ, ಪೂವಯ್ಯ ಮೃತಪಟ್ಟರು.
ಈ ಬಗ್ಗೆ ಎಂ.ಎಂ. ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರು ಪೊಲೀಸರು ವೀರಪ್ಪನ್ ತಂಡದಿಂದ ಕೊಲೆಯಾದ ಬಗ್ಗೆ ಖಚಿತವಾಗಿದೆ.
ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳಿಗೆ ಮಾರಕವಾಗಿದ್ದ ವೀರಪ್ಪನ್ ವಿರುದ್ಧ ಹೋರಾಡಿ ಹುತಾತ್ಮರಾಗಿರುವ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಉದ್ಯಾನವನಕ್ಕೆ ಇಡುವಂತೆ ಈಗಾಗಲೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮುದ್ದಯ್ಯ ತಿಳಿಸಿದರು.