ಸೋಮವಾರಪೇಟೆಯಲ್ಲಿ ಕನ್ನಡ ರಾಜ್ಯೋತ್ಸವ : ಕನ್ನಡ ಭಾವನಾತ್ಮಕ ಭಾಷೆಯಾಗಲಿ : ಶಾಸಕ ಅಪ್ಪಚ್ಚುರಂಜನ್ ಕರೆ

01/11/2020

ಮಡಿಕೇರಿ ನ.1 : ಕನ್ನಡಿಗರು ಪ್ರತಿದಿನದ ವ್ಯವಹಾರ, ವ್ಯಾಪಾರ ಇತರ ಚಟುವಟಿಕೆಗಳಲ್ಲಿ ಕನ್ನಡವನ್ನೇ ಬಳಸಬೇಕು, ನಿತ್ಯ ಬದುಕಿನಲ್ಲಿ ಕನ್ನಡ ಭಾವನಾತ್ಮಕ ಭಾಷೆಯಾಗಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕರೆ ನೀಡಿದ್ದಾರೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ಆರ್.ಗೋವಿಂದರಾಜು ಮಾತನಾಡಿ ಕರ್ನಾಟಕವು ತನ್ನದೇ ಆದ ಹಿರಿಮೆ ಗರಿಮೆ ಮತ್ತು ಪರಂಪರೆಯುಳ್ಳ ಭಾರತದ ರಾಜ್ಯಗಳಲ್ಲಿ ಒಂದಾಗಿದೆ, ಪ್ರಕೃತಿ ಸೌಂದರ್ಯ, ವನ್ಯಜೀವಿಗಳ ಸಮೃದ್ಧಿ ಹಾಗೂ ವಿಶ್ವ ಪರಂಪರೆಯ ಸಾಲಿನಲ್ಲಿ ಪ್ರಸಿದ್ಧ ಪಡೆದ ಕೀರ್ತಿ ನಮ್ಮ ಕರ್ನಾಟಕ ರಾಜ್ಯಕ್ಕಿದೆ ಎಂದರು, ತಾಲೂಕು ಪಂಚಾಯಿತಿ ಉಪಾಧ್ಯಕ್ಷರು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಉಪಾಧ್ಯಕ್ಷರಾದ ಎಂ.ಬಿ.ಅಭಿಮನ್ಯು ಕುಮಾರ್ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ಅಲ್ಲ, ಖಾಸಗಿ ಶಾಲೆಗಳಲ್ಲೂ ಕನ್ನಡ ಕಡ್ಡಾಯ ಆಗಬೇಕೆಂದರು.
ಪ.ಪಂ ಮುಖ್ಯಾಧಿಕಾರಿ, ನಾಚಪ್ಪ, ತಾ.ಪಂ ಸದಸ್ಯೆ ಕುಮಾರಿ ತಂಗಮ್ಮ, ತಾ.ಪಂ ನಿರ್ವಹಣಾಧಿಕಾರಿ ಜಯಣ್ಣ, ಪೊಲೀಸ್ ವೃತ್ತ ನೀರೀಕ್ಷಕ ಮಹೇಶ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಜೆ.ಸಿ.ಶೇಖರ್, ಇದ್ದು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯ ಎಸ್.ಮಹೇಶ್ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಶಿಕ್ಷಕರಾದ ಕವಿತ ಮತ್ತು ತಂಡದವರು ಹಾಗೂ ರೈತ ಗೀತೆಯನ್ನು ಸೌಭಾಗ್ಯ ಮತ್ತು ತಂಡದವರು ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಪಾಂಡು ಸ್ವಾಗತಿಸಿ, ರಾಷ್ಟ್ರೀಯ ಹಬ್ಬ ಆಚರಾಣ ಸಮಿತಿ ಸದಸ್ಯ ಎಸ್.ಡಿ.ವಿಜೇತ್ ವಂದಿಸಿದರು.
ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.