ಅಂಚೆ ಕಚೇರಿ ಎದುರು ಸ್ವಚ್ಛತಾ ಕಾರ್ಮಿಕರ ಪ್ರತಿಭಟನೆ

03/11/2020

ಮಡಿಕೇರಿ ನ.3 : ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ಕನಿಷ್ಠ ವೇತನ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಪ್ಯೂಪಲ್ಸ್ ಮೂವ್‍ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಮಿಕರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಅಂಚೆ ಕಚೇರಿ ಎದುರು ಜಮಾಯಿಸಿದ ಸ್ವಚ್ಛತಾ ಸಿಬ್ಬಂದಿಗಳು ಮೌನ ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಪ್ಯೂಪಲ್ಸ್ ಮೂವ್‍ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ, ನಗರದ ಅಂಚೆ ಕಚೇರಿಯಲ್ಲಿ ಹೆಚ್.ಕೆ.ಲೀಲಾವತಿ ಎಂಬುವವರು ಸುಮಾರು 32 ವರ್ಷಗಳಿಂದ ಸಪಾಯಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಐದು ಸಾವಿರ ಸಂಬಳ ನೀಡಲಾಗುತ್ತಿತ್ತು.
ಆದರೆ ಇತ್ತೀಚೆಗೆ ಬಂದ ಅಂಚೆ ಅಧಿಕಾರಿಯವರು ವಿನಾಕಾರಣ ಕೆಲಸಕ್ಕೆ ಬರಬಾರದೆಂದು ತಾಕೀತು ಮಾಡಿ ಕೆಲಸದಿಂದ ತೆಗೆದುಹಾಕಿದ್ದರು. ನಂತರ ಪ್ಯೂಪಲ್ಸ್ ಮೂವ್‍ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆ ಸ್ವಚ್ಛತಾ ಕಾರ್ಮಿಕರ ಸಂಘದ ಸಹಕಾರದೊಂದಿಗೆ ಮಾನವ ಹಕ್ಕಿನ ಮೂಲಕ ಅಂಚೆ ಕಛೇರಿಯ ಅಧಿಕಾರಿಯವರನ್ನು ಸಂರ್ಪಕಿಸಿ ವಿಷಯವನ್ನು ಪ್ರಸ್ತಾಪಿಸಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು.
ಇದೀಗ ಮತ್ತೆ ಕೆಲಸಕ್ಕೆ ಬಂದ ಮಹಿಳೆಯನ್ನು ನಿಂದಿಸಿ ಕೇವಲ ಎರಡು ಸಾವಿರ ರೂ. ಮಾತ್ರ ಸಂಬಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇಳಿವಯಸ್ಸಿನ ಕಾರ್ಮಿಕರು ಕೊರೋನ ಸಮಯದಲ್ಲಿ 2 ಸಾವಿರ ರೂ. ವೇತನದಿಂದ ಜೀವನ ಸಾಗಿಸುವುದು ಅಸಾಧ್ಯವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಠ ವೇತನವನ್ನು ನೀಡಲು ಕ್ರಮ ಕೈಗೊಂಡು ಲೀಲಾವತಿ ಅವರನ್ನು ಕೆಲಸದಲ್ಲಿ ಮುಂದುವರೆಸಬೇಕೆಂದು ಅವರು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಸ್ವಚ್ಛತಾ ಕಾರ್ಮಿಕರ ಸಂಘದ ಅಧ್ಯಕ್ಷರಾದ ಜಾನಕಿ, ಉಪಾಧ್ಯಕ್ಷೆ ದಿವ್ಯ, ಕಾರ್ಯದರ್ಶಿ ಬೇಬಿ, ಪ್ರಮುಖರಾದ ಶೋಭಾ, ಭಾಗ್ಯ, ಕೃತಿಕ ಮತ್ತಿತರರು ಈ ಸಂದರ್ಭ ಹಾಜರಿದ್ದರು. ಬೇಡಿಕೆ ಕುರಿತು ಅಂಚೆ ಅಧೀಕ್ಷಕರ ಗಮನ ಸೆಳೆಯಲಾಯಿತು.