ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ನೂತನ ಅಧ್ಯಕ್ಷರಾಗಿ ಶ್ರೀಅಮೂರ್ತಾನಂದ ಜೀ ಅಧಿಕಾರ ಸ್ವೀಕಾರ

May 14, 2021

ಮಡಿಕೇರಿ ಮೇ 14 : ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ನೂತನ ಅಧ್ಯಕ್ಷರಾಗಿ ಶ್ರೀ ಅಮೂರ್ತಾನಂದ ಜೀಯವರು ಅಧಿಕಾರ ಸ್ವೀಕರಿಸಿದ್ದು, ಇದೇ ಸಂದರ್ಭ ಇಲ್ಲಿಯವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ಬೋಧ ಸ್ವರೂಪಾನಂದಜೀ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಶ್ರೀ ಬೋಧ ಸ್ವರೂಪಾನಂದಜೀ ಅವರು ತುರುವೇಕೆರೆಯ ಮದಿಹಳ್ಳಿ ಬದರಿಕಾಶ್ರಮದ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಅವರ ಸ್ಥಾನದ ಜವಾಬ್ದಾರಿಯನ್ನು ಸುದೀರ್ಘ 47 ವರ್ಷಗಳ ಕಾಲ ಮೈಸೂರು, ಮುಂಬಯಿ ಸೇರಿದಂತೆ ಅನೇಕ ಮಠಗಳಲ್ಲಿ ಸೇವೆ ಸಲ್ಲಿಸಿ ಅನುಭವವಿರುವ ಶ್ರೀ ಅಮೂರ್ತಾನಂದ ಜೀಯವರು ಶುಕ್ರವಾರ ವಹಿಸಿಕೊಂಡರು.
ಪೊನ್ನಂಪೇಟೆ ಆಶ್ರಮದಲ್ಲಿ ಅತ್ಯಂತ ಸರಳವಾಗಿ, ಸಮಿತಿ ಸದಸ್ಯರುಗಳಿಗೆ ಸೀಮಿತವಾಗಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕಾರ ಮತ್ತು ಬೀಳ್ಕೊಡುಗೆಯ ಹೃದಯ ಸ್ಪರ್ಶಿ ಕಾರ್ಯಕ್ರಮ ನಡೆಯಿತು.
ಶ್ರೀ ಬೋಧಸ್ವರೂಪಾನಂದ ಜೀಯವರು 2007 ಮಾರ್ಚ್ 24 ರಂದು ಕೊಲ್ಕತ್ತಾದಿಂದ ಪೊನ್ನಂಪೇಟೆಗೆ ಆಗಮಿಸಿ, ಆಶ್ರಮದ ಹಿರಿಯ ಸ್ವಾಮೀಜಿಗಳಾದ ಶ್ರೀ ಜಗದಾತ್ಮನಂದಜೀ ಮಹಾರಾಜ್ ಅವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಳಿಕ 2010ರ ಡಿ.27 ರಂದು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಸರಳ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಬೋಧ ಸ್ವರೂಪಾನಂದ ಜೀಯವರು, ಶ್ರೀ ರಾಮಕೃಷ್ಣ ಶಾರದಾಶ್ರಮವು ರಾಮಕೃಷ್ಣರ ಶರೀರವಾಗಿದೆ. ಈ ಸಂಘಕ್ಕೆ ಬ್ರ‍್ರಹ್ಮಚರ್ಯರು, ಸನ್ಯಾಸಿಗಳು, ಸ್ವಯಂಸೇವಕರು ನೀಡಿದ ಸೇವೆಯನ್ನು ರಾಮಕೃಷ್ಣರಿಗೆ ಸಲ್ಲಿಸಿದ ಪೂಜೆ ಎಂದೇ ಭಾವಿಸಬಹುದು. ನಮ್ಮ ಎಲ್ಲಾ ಸೇವೆಗಳನ್ನು ಶ್ರೀರಾಮಕೃಷ್ಣರಿಗೆ ಅರ್ಪಿಸುವ ಪರಂಪರೆ ಶ್ರೀರಾಮಕೃಷ್ಣ ಆಶ್ರಮದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ರಾಮಕೃಷ್ಣ ಮಿಥನ್‌ನ ಟ್ರಸ್ಟಿಗಳು ಹಾಗೂ ಹಾಗೂ ಅಧ್ಯಕ್ಷರಾದ ಶ್ರೀ ಮುಕ್ತಿದಾನಂದಾಜೀ, ಪೊನ್ನಂಪೇಟೆ ಆಶ್ರಮದ ಶ್ರೀಪರಹಿತಾನಂದಜೀ, ಶ್ರೀಶಿವಕಾಂತಾನಂದಜೀ, ಶ್ರೀವಿಶ್ರವಿದಾನಂದಜೀ, ಶ್ರೀ ಭೂನಾಥಾನಂದಜೀ , ಆಶ್ರಮದ ಸಲಹಾ ಸಮಿತಿ ಸದಸ್ಯರುಗಳಾದ ಕೆ. ಎನ್. ಚೆಂಗಪ್ಪ, ಡಾ. ಶಿವಪ್ಪ, ಕೆ.ಯು. ಉತ್ತಪ್ಪ, ಡಾ. ಚಂದ್ರಶೇಖರ್, ಸಿ. ಜಿ. ಕುಶಾಲಪ್ಪ, ಬಿ. ರಮೇಶ್, ಸ್ಥಳೀಯರಾದ ಎಂ. ಪಿ. ಕೇಶವ್ ಕಾಮತ್, ಶ್ರೀಧರ್ ನೆಲ್ಲಿತ್ತಾಯ, ಚಂದನ್ ಕಾಮತ್, ರೇಖಾಶ್ರೀಧರ್, ಕೆ. ಪಿ. ಸುಬ್ಬಯ್ಯ, ಆಶ್ರಮದ ಡಾ. ಹಿತೇಶ್ ಪಾಲ್ಗೊಂಡಿದ್ದರು.

error: Content is protected !!