ಪ್ರೊ ಕೆ. ಎಸ್. ನಿಸಾರ್ ಅಹಮದ್ ಅವರಿಗೆ ನುಡಿನಮನ

03/05/2020

ಪದ್ಮಶ್ರೀ ಕಿರೀಟದ ನಿತ್ಯೋತ್ಸವ ಕವಿಗೆ ನುಡಿನಮನ

ವಿಶೇಷ ಲೇಖನ: ರಫೀಕ್ ತೂಚಮಕೇರಿ

ಜೋಗದ ಸಿರಿ ಬೆಳಕಿನಲ್ಲಿತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ
ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ….

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…

ಇದು ಕನ್ನಡದ ‘ನಿತ್ಯೋತ್ಸವ’ದ ಕವಿ ಪದ್ಮಶ್ರೀ ಪ್ರೊಫೆಸರ್ ಕೆ.ಎಸ್. ನಿಸಾರ್ ಅಹಮದ್ ಅವರು ರಚಿಸಿದ ಸಾಹಿತ್ಯ.

ಈ ಭಾವಗೀತೆಯನ್ನು ಕೇಳದ ಕನ್ನಡಿಗರಿಲ್ಲ. ಒಂದು ಕಾಲದಲ್ಲಿ ಈ ಹಾಡು ಕನ್ನಡಿಗರ ಮನೆಮಾತಾಗಿತ್ತು. (ಇಂದಿಗೂ ಕೂಡ) ಈ ಸಾಹಿತ್ಯ ನಿಸಾರ್ ಅಹಮದ್ ಅವರಿಗೆ ಬಹುದೊಡ್ಡ ಖ್ಯಾತಿಯನ್ನು ತಂದುಕೊಟ್ಟಿತು. ಈ ಕಾರಣದಿಂದಲೇ ಅವರನ್ನು ‘ನಿತ್ಯೋತ್ಸವದ ಕವಿ’ ಎಂದು ಕನ್ನಡದ ಸಾರಸ್ವತ ಲೋಕ
ಹೆಮ್ಮೆಯಿಂದ ಕರೆಯಿತು.

ನಾಡಿನ ಸಂವೇದನಾಶೀಲ ಸಾಹಿತಿಗಳಾಗಿದ್ದ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರು ಇಂದು ಕನ್ನಡನಾಡನ್ನು ಅಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೊಂದು ನುಡಿನಮನ.

ಕನ್ನಡ ಸಾಹಿತ್ಯಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದ ಪ್ರೊ. ಕೆ. ಎಸ್.ನಿಸಾರ್ ಅಹಮದ್ ಅವರನ್ನು ಕನ್ನಡಿಗರು ಮತ್ತು ಕನ್ನಡ ನಾಡು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಪ್ರೊ. ಕೆ.ಎಸ್.ನಿಸಾರ್ ಅಹಮದ್ ಅವರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ‘ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್’ ಎಂಬುದು ಇವರ ಪೂರ್ಣ ಹೆಸರು.

ಅಂದಿನ ಬ್ರಿಟಿಷ್ ಆಳ್ವಿಕೆಯ ಮೈಸೂರು ರಾಜಸಂಸ್ಥಾನದಲ್ಲಿದ್ದ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 1936ರ ಫೆಬ್ರವರಿ 5ರಂದು ನಿಸಾರ್ ಅಹಮದ್ ಅವರು ಜನಿಸಿದರು.1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಆರಂಭದಲ್ಲಿ ಗುಲ್ಬರ್ಗ (ಈಗಿನ ಕಲಬುರ್ಗಿ) ಮತ್ತು ಮೈಸೂರಿನಲ್ಲಿ ಸಹಾಯಕ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದರು.

ಬೆಂಗಳೂರಿನ ಸೆಂಟ್ರಲ್ ಕಾಲೇಜು ಮತ್ತು ಚಿತ್ರದುರ್ಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ನಿಸಾರ್ ಅಹಮ್ಮದ್ ಅವರು, 1967-72 ಮತ್ತು 1975-78ರ ಅವಧಿಯಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹೀಗೆ 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಹಾಗು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಕನ್ನಡ ಭಾಷೆಯಲ್ಲಿ ಅಪಾರ ಪಾಂಡಿತ್ಯ ಸಾಧಿಸಿದ್ದ ಪ್ರೊ. ನಿಸಾರ್ ಅಹ್ಮದ್ ಅವರು, ಕನ್ನಡದ ಉತ್ತಮ ಕವಿ ಮತ್ತು ಹೆಸರಾಂತ ಬರಹಗಾರರಾಗಿದ್ದರು. ಸಾಮಾಜಿಕ ಕಳಕಳಿ ಮತ್ತು ಮಾನವೀಯ ತುಡಿತವನ್ನು ಹೊಂದಿದ್ದ ಇವರು, ತಮ್ಮ ಕವನ ಮತ್ತು ಬರಹಗಳಲ್ಲಿ ಸಮಾಜಮುಖಿ ಚಿಂತನೆಗೆ ಆದ್ಯತೆ ನೀಡುತ್ತಿದ್ದರು.

ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ 10ನೇ ವಯಸ್ಸಿನಲ್ಲೇ ಆರಂಭಗೊಂಡಿತು. ‘ಜಲಪಾತ’ದ ಬಗ್ಗೆ ಇವರು ಬರೆದ ಕವನ ಅಂದಿನ ಕಾಲದ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ನಿಸಾರ್ ಅಹ್ಮದ್ ಅವರು ಇಲ್ಲಿಯವರೆಗೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ‘ಮನಸು’, ‘ಗಾಂಧಿ ಬಜಾರು’ ಹಾಗು ‘ನಿತ್ಯೋತ್ಸವ’ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ.

ನಿಸಾರ್‍ ಅಹಮದ್ ಅವರು ಕನ್ನಡನಾಡಿನ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.1978ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ‘ನಿತ್ಯೋತ್ಸವ’ ಹೊರಬಂದು ಕನ್ನಡ ಸಂಗೀತ ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು.

‘ಕುರಿಗಳು ಸಾರ್‍ ಕುರಿಗಳು’ ಎಂಬ ರಾಜಕೀಯ ವಿಡಂಬನೆ ಕವನ, ‘ಭಾರತವು ನಮ್ಮ ದೇಶ’ ಎಂಬ ಸರ್‍ ಮೊಹಮದ್ ಇಕ್ಬಾಲ್ ಅವರ ‘ಸಾರೆ ಜಹಾಂ ಸೆ ಅಚ್ಚಾ’ ಕವನದ ಕನ್ನಡ ಭಾಷಾಂತರ, ‘ಬೆಣ್ಣೆ ಕದ್ದ ನಮ್ಮ ಕೃಷ್ಣ’, ‘ಮನದೊಂದಿಗೆ ಮಾತುಕತೆ’, ‘ಸಂಜೆ ಐದರ ಮೇಲೆ’ ಮೊದಲಾದವು ಈ ಪ್ರಸಿದ್ಧ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.

2007ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರತಿಷ್ಠಿತ ಪೀಠ ಅಲಂಕರಿಸಿದ್ದು, ನಿಸಾರ್ ಅಹಮದ್ ಅವರಿಗೆ ಕನ್ನಡ ನಾಡು ಸಲ್ಲಿಸಿದ ಬಹುದೊಡ್ಡ ಗೌರವವಾಗಿದೆ.
ವಿಶ್ವಪ್ರಸಿದ್ಧ 407ನೇ ಮೈಸೂರು ದಸರಾ ಮಹೋತ್ಸವವನ್ನು 2017ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಉದ್ಘಾಟಿಸಿದ ಕೀರ್ತಿಯೂ ನಿತ್ಯೋತ್ಸವ ಖ್ಯಾತಿಯ ಕವಿ ಕೆ. ಎಸ್. ನಿಸಾರ್ ಅಹಮದ್ ಅವರಿಗೆ ಸಲ್ಲುತ್ತದೆ.

1981ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದ ನಿಸಾರ್ ಅಹಮದ್ ಅವರು, 1982ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದರು. 2003ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಸಾಹಿತ್ಯ ದಿಗ್ಗಜರಿಗೆ ನೀಡಲಾಗುವ ಪ್ರತಿಷ್ಠಿತ ‘ನಾಡೋಜ’ ಬಿರುದನ್ನು ಗಳಿಸಿದ ಇವರು, 2008ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಗೆ ಭಾಜನರಾದರು.

ಅದೇ ವರ್ಷ ಭಾರತದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಯು ಇವರ ಮುಡಿಗೇರಿತು. ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದ ನಿಸಾರ್ ಅಹ್ಮದ್ ಅವರು, 2017ರಲ್ಲಿ ಕನ್ನಡದ ಪ್ರತಿಷ್ಠಿತ ‘ಪಂಪ’ ಪ್ರಶಸ್ತಿ ಪುರಸ್ಕೃತರಾದರು.

84 ವರ್ಷ ಪ್ರಾಯದ ಕನ್ನಡದ ಈ ಮೇರು ಸಾಹಿತಿ ಇಂದು(03-05-2020) ನಿಧನರಾಗಿದ್ದಾರೆ. ಕಳೆದ ಹಲವು ಶತಮಾನಗಳಿಂದ ಅಸಂಖ್ಯಾತ ಸಾಹಿತಿ ದಿಗ್ಗಜರು ಕಟ್ಟಿಬೆಳೆಸಿದ ಕನ್ನಡ ಸಾರಸ್ವತ ಲೋಕಕ್ಕೆ ನಿಸಾರ್ ಅಹಮದ್ ಅವರ ವಿಯೋಗದಿಂದ ನಷ್ಟ ಉಂಟಾಗಿದೆ. ಅಲ್ಲದೆ ಇವರ ನಿಧನದಿಂದ ರಾಜ್ಯದ ಸಾಹಿತ್ಯ ಕ್ಷೇತ್ರದ ಹಿರಿ ತಲೆಮಾರಿನ ಕೊಂಡಿಯೊಂದು ಕಳಚಿದಂತಾಗಿದೆ.

ಇವರ ನಿಧನಕ್ಕೆ ಇಡೀ ಕನ್ನಡ ನಾಡು ಕಂಬನಿ ಮಿಡಿಯುತ್ತಿದೆ. ಅಸಂಖ್ಯ ಕನ್ನಡ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಆದರೆ 5 ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಸಾಹಿತ್ಯ ಲೋಕದಲ್ಲಿ ದೃವತಾರೆಯಂತೆ ಮೆರೆದ ಈ ಹಿರಿಯ ಸಾಹಿತಿಯನ್ನು ಕನ್ನಡನಾಡು ಅರ್ಥಪೂರ್ಣವಾಗಿ ಬೀಳ್ಕೊಡಲಾಗುತ್ತಿಲ್ಲ ಎಂಬ ಕೊರಗು ಪ್ರತಿ ಕನ್ನಡಿಗರನ್ನು ಸದಾ ಕಾಡುತ್ತಿರುತ್ತದೆ.
ಕೊರೋನಾ ಎಂಬ ಮಹಾಮಾರಿ ಸೋಂಕನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನಿರ್ಬಂಧ, ನಿತ್ಯೋತ್ಸವ ಕವಿಯ ಮುಖದರ್ಶನವನ್ನು ಅಂತಿಮವಾಗಿ ಪಡೆಯಲು ನಾಡಿನ ಜನತೆಗೆ ಅಡ್ಡಿಯಾಗಿದೆ ಎಂಬುದು ಮಾತ್ರ ನೋವಿನ ಮಾತು.