ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಿದ್ಧತೆ

05/05/2020

ಬೆಂಗಳೂರು ಮೇ 4 : ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಸಿದ್ಧತೆಗಳನ್ನು ಪ್ರಾರಂಭಿಸಬೇಕೆಂದು ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಸೋಮವಾರ ರಾಜ್ಯದ ಎಲ್ಲ ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರೊಂದಿಗೆ ವಿಡಿಯೊ ಸಂವಾದ ನಡೆಸಿದ ಸಚಿವರು ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಅವಶ್ಯಕವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಗಳನ್ನು ನಿರ್ವಹಿಸುವ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಸೂಚನೆ ನೀಡಿದರು.
ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಸಿರು ಮತ್ತು ಕಂಟೇನ್ ಮೆಂಟ್ ವಲಯಗಳೆಂದು ಗುರುತಿಸಿರುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕೈಗೊಳ್ಳಬೇಕಿರುವ ಪರೀಕ್ಷಾ ಸಿದ್ಧತೆ ಕುರಿತು ಸಚಿವರು ಜಿಲ್ಲಾ ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿದರು.
ಅಧಿಕಾರಿಗಳ ಅಭಿಪ್ರಾಯದಂತೆ ಮಕ್ಕಳು ತಮ್ಮ ಪರೀಕ್ಷಾ ದಿನಾಂಕ ತಿಳಿಯಲು ಉತ್ಸುಕರಾಗಿದ್ದು ಮತ್ತು ತಮ್ಮ ಪರಿಶ್ರಮದ ಆಧಾರದಲ್ಲಿ ಪರೀಕ್ಷಾ ಫಲಿತಾಂಶವನ್ನು ಪಡೆಯಬೇಕೆಂದು ಬಯಸುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಈ ಸೂಚನೆ ನೀಡಿದ್ದಾರೆ.