ಹಾಡಿಗಳ ಪ್ರವೇಶಕ್ಕೆ ನಿರ್ಬಂಧ ಬೇಡ : ಗಿರಿಜನ ಮುಖಂಡರ ಮನವಿ

09/05/2020

ಮಡಿಕೇರಿ ಮೇ 8 : ಜಿಲ್ಲಾಡಳಿತ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಮತ್ತು ಐಟಿಡಿಪಿ ಇಲಾಖೆಗೆ ಸಂಬಂಧಿಸಿದಂತೆ ಫೋನ್ ಇನ್ ಕಾರ್ಯಕ್ರಮ ಶುಕ್ರವಾರ ನಡೆಯಿತು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳ ಕುರಿತು ಅಧಿಕಾರಿಗಳು ಮಾಹಿತಿ ಪಡೆದರು.
ಗೋಣಿಕೊಪ್ಪ ಬಳಿಯ ಗಿರಿಜನ ಮುಖಂಡ ಪಿ.ಎಸ್.ಮುತ್ತ ಅವರು ಕರೆ ಮಾಡಿ, ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯ ವರೆಗೆ ನಿಷಾಧಜ್ಞೆ ಇರುತ್ತದೆ. ಆದರೆ ಪೊನ್ನಂಪೇಟೆ, ಗೋಣಿಕೊಪ್ಪ ಹತ್ತಿರ ಇರುವ ಹಾಡಿಗಳಿಗೆ ಸಂಜೆ 5 ಗಂಟೆ ನಂತರ ಓಡಾಟಕ್ಕೆ ನಿರ್ಬಂಧ ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.
ಇದಕ್ಕೆ ಮಾಹಿತಿ ನೀಡಿದ ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್ ಅವರು, ಜಿಲ್ಲಾಡಳಿತದ ನಿರ್ದೇಶನದಂತೆ ಎಲ್ಲರೂ ಸಮಯ ಪಾಲನೆ ಮಾಡಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಪೊನ್ನಂಪೇಟೆಯ ಮತ್ತೊಬ್ಬ ಮುಖಂಡ ವೈ.ಕೆ.ರಾಮು ಅವರು ಕರೆ ಮಾಡಿ, ಅರಣ್ಯ ಹಕ್ಕು ಪತ್ರಕ್ಕೆ ಸಂಬಂಧಿಸಿದಂತೆ ಗೊಂದಲಗಳನ್ನು ನಿವಾರಿಸುವ ಬಗ್ಗೆ ಐಟಿಡಿಪಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪೊನ್ನಂಪೇಟೆಯಿಂದ ಸಿದ್ದಯ್ಯ ಅವರು ಕರೆ ಮಾಡಿ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳ ಪ್ರವೇಶಕ್ಕೆ ಅರ್ಜಿ ಆಹ್ವಾನ ಮಾಡುವುದು ಯಾವಾಗ ಎಂದು ಮಾಹಿತಿ ಪಡೆದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಅವರು ಉತ್ತರಿಸಿ ಲಾಕ್‍ಡೌನ್ ಮುಗಿದ ನಂತರ ಸರ್ಕಾರದ ನಿರ್ದೇಶನದಂತೆ ಅರ್ಜಿ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಇನ್ನುಳಿದಂತೆ ಸೇವಾ ಸಿಂಧು ವಿಚಾರವಾಗಿ ಹಲವು ಕರೆಗಳು ಸ್ವೀಕೃತವಾದವು.
ನೋಡಲ್ ಅಧಿಕಾರಿ ಶ್ರೀನಿವಾಸ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಮಂಜುನಾಥ್(ವಿರಾಜಪೇಟೆ), ಶೇಖರ್ (ಸೋಮವಾರಪೇಟೆ), ಪೊನ್ನಂಪೇಟೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರೀಕ್ಷಕರಾದ ನವೀನ್, ರಂಜಿತ್, ಆಶಿಕ್ ಇತರರು ಹಾಜರಿದ್ದರು.