ವಿರಾಜಪೇಟೆಯಲ್ಲಿ ವಿದ್ಯುತ್ ವ್ಯತ್ಯಯ : ಸಾರ್ವಜನಿಕರ ಅಸಮಾಧಾನ

11/05/2020

ಮಡಿಕೇರಿ ಮೇ 11 : ವಿರಾಜಪೇಟೆ ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಸ್ಥಗಿತಗೊಂಡ ವಿದ್ಯುತ್ ಸರಬರಾಜು ಭಾನುವಾರ ಸಂಜೆವರೆಗೂ ಪೂರೈಕೆಯಾಗದ ಬಗ್ಗೆ ತಾಲೂಕಿನ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸಂಬಂಧಿಸಿದವರ ನಿರ್ಲಕ್ಷವೇ ನೇರ ಕಾರಣ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಶನಿವಾರ ರಾತ್ರಿ 7.30 ರ ಸಮಯದಲ್ಲಿ ತಿತಿಮತಿ ಸಮೀಪದ ಎಡತೊರೆಯ ಗುಂಬಿರ ಶಂಭು ಅವರ ಕಾಫಿ ತೋಟದಲ್ಲಿ ಆನೆಯೊಂದು ಭಾರಿ ಗಾತ್ರದ ಮರವನ್ನು ಬೇರುಸಮೇತ ಕಿತ್ತೆಸೆದ ಪರಿಣಾಮ ಈ ತೋಟದ ಮೇಲ್ಭಾಗದ ಮೂಲಕ ಹಾದು ಹೋಗಿದ್ದ 66 ಕೆ.ವಿ. ವಿದ್ಯುತ್ ಮಾರ್ಗದ ತಂತಿಗೆ ತೀವ್ರ ಹಾನಿಯಾಗಿತ್ತು.
ವಿದ್ಯುತ್ ಮಾರ್ಗದ ತಂತಿಯ ಮೇಲೆ ಮರ ಬಿದ್ದ ಘಟನೆಯನ್ನು ಗೋಣಿಕೊಪ್ಪಲು ಸೆಸ್ಕ್ ಸಿಬ್ಬಂದಿಗಳು ಶನಿವಾರ ರಾತ್ರಿಯೇ ಪತ್ತೆಹಚ್ಚಿದರು.
ಘಟನೆ ನಡೆದಿರುವ ಮಾರ್ಗ ಪಿರಿಯಾಪಟ್ಟದಿಂದ ಪೊನ್ನಂಪೇಟೆಯ ಕೆಪಿಟಿಸಿಎಲ್ ‘ಮಿಂಚ್ಗೊನೆ’ಗೆ ವಿದ್ಯುತ್ ಸರಬರಾಜಾಗುವ ಮುಖ್ಯ ಮಾರ್ಗವಾದರಿಂದ ಇದರೆಲ್ಲ ನಿರ್ವಹಣೆ ಕೆಪಿಟಿಸಿಎಲ್ ಗೆ ಸೇರುತ್ತದೆ.
ಶನಿವಾರ ರಾತ್ರಿ ಈ ಘಟನೆ ನಡೆದಿದ್ದರಿಂದ ಸಂಬಂಧಿಸಿದವರ ಯಾರ ಮೇಲೂ ಯಾವುದೇ ಆರೋಪ ಹೊರಿಸಲು ಸಾಧ್ಯವಿಲ್ಲ. ಕಾರಣ ಅದು ಕಾಡಾನೆ ಹಾವಳಿ ಪ್ರದೇಶವಾದ್ದರಿಂದ ರಾತ್ರಿ ವೇಳೆ ಅಲ್ಲಿ ಕೆಲಸ ನಿರ್ವಹಿಸುವುದು ಸಿಬ್ಬಂದಿಗಳಿಗೆ ಸಾಧ್ಯವಾಗುವುದಿಲ್ಲ.
ಆದರೆ ತಂತಿ ಮೇಲೆ ಬಿದ್ದ ಮರವನ್ನು ಭಾನುವಾರ ಬೆಳಿಗ್ಗೆಯಿಂದಲೇ ತೆರವುಗೊಳಿಸುವ ಕಾರ್ಯ ಆರಂಭಗೊಂಡಿದ್ದರೂ ಸಂಜೆ 5.30 ರವರೆಗೂ ವಿರಾಜಪೇಟೆ ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ದೊರೆಯದೆ ಇರುವುದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಭಾನುವಾರ ಬೆಳಿಗ್ಗೆಯಿಂದಲೇ ದುರಸ್ತಿ ಕೆಲಸ ಆರಂಭಗೊಂಡಿದ್ದರೂ ವಿದ್ಯುತ್ ಸಂಪರ್ಕ ನೀಡಲು ವಿಳಂಬವೇಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕೆಪಿಟಿಸಿಎಲ್ ಅಧಿಕಾರಿಗಳು ಈ ಕುರಿತು ವಹಿಸಿದ್ದ ನಿರ್ಲಕ್ಷವೇ ವಿಳಂಬಕ್ಕೆ ಕಾರಣ ಎಂಬುದು ತಾಲೂಕಿನ ಹಲವು ನಾಗರಿಕ ಪ್ರಮುಖರ ಆರೋಪವಾಗಿದೆ. 66 ಕೆ.ವಿ. ವಿದ್ಯುತ್ ಮಾರ್ಗದ ತಂತಿ ಸರಿಪಡಿಸಲು ಏಕೆ ಇಷ್ಟು ವಿಳಂಬ.? ಘಟನೆಯಿಂದ ಮಾರ್ಗದ ಯಾವುದೇ ಕಂಬಕ್ಕೆ ಹಾನಿ ಆಗದಿದ್ದರೂ, ದಿನವಿಡೀ ದುರಸ್ತಿ ಕೆಲಸ ಮಾಡಿಯೂ ವಿದ್ಯುತ್ ಸಂಪರ್ಕ ಕಲ್ಪಿಸಲು ಏಕೆ ಸಾಧ್ಯವಾಗಿಲ್ಲ ಎಂದು ಖಾರವಾಗಿ ಪ್ರಶ್ನಿಸಿರುವ ನಾಗರಿಕರು, ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಕರ್ತವ್ಯದಲ್ಲಿ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ನೇರ ಕಾರಣ ಎಂದು ಆರೋಪಿಸಿದ್ದಾರೆ.