ಕಂದಾಯ ಇಲಾಖೆಯಲ್ಲಿ ಅರ್ಜಿ ವಿಲೇವಾರಿ ವಿಳಂಬ : ಬೆಳೆಗಾರರ ಸಂಘಟನೆಗಳ ನಿಯೋಗದಿಂದ ಸಚಿವರಿಗೆ ಮನವಿ

22/05/2020

ಮಡಿಕೇರಿ ಮೇ 22 : ಕಂದಾಯ ಇಲಾಖೆಯಲ್ಲಿ ರೈತರ ಅರ್ಜಿಗಳು ವಿಲೇವಾರಿಯಾಗದೆ ತೊಂದರೆಯಾಗುತ್ತಿರುವ ಬಗ್ಗೆ ಕೊಡಗು ಜಿಲ್ಲೆಯ ಸರ್ವ ಬೆಳೆಗಾರ ಸಂಘಟನೆಗಳು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ಅವರ ಗಮನಸೆಳೆದಿವೆ.
ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ರೈತರು ಸಲ್ಲಿಸಿರುವ ಅರ್ಜಿಗಳು ಸಕಾಲದಲ್ಲಿ ವಿಲೇವಾರಿಯಾಗದೆ ರೈತರು ಸಂಕಷ್ಟ ಅನುಭವಿಸುವಂತಾಗಿದ್ದು, ರೈತರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೊಡಗು ಸರ್ವ ಬೆಳೆಗಾರ ಸಂಘಟನೆಗಳ ಸಂಸ್ಥೆಯ ಪದಾಧಿಕಾರಿಗಳು ಸಚಿವರಲ್ಲಿ ಮನವಿ ಮಾಡಿದರು.
ಇದರೊಂದಿಗೆ ಕಾಫಿ ಬೆಳೆಗಾರರ 10ಅಶ್ವಶಕ್ತಿ(ಹೆಚ್‍ಪಿ)ವರೆಗಿನ ಪಂಪ್‍ಸೆಟ್‍ಗಳಿಗೆ ಇತರ ಬೆಳೆಗಾರರಂತೆಯೇ ಉಚಿತ ವಿದ್ಯುತ್ ನೀಡಬೇಕು ಎಂದು ಮನವಿ ಮಾಡಲಾಯಿತು.
ಇದೇ ಸಂದರ್ಭ ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಎಂ.ಪಿ.ಸುನಿಲ್ ಸುಬ್ರಮಣಿ ಅವರಿಗೂ ಮನವಿ ಸಲ್ಲಿಸಲಾಯಿತು.
ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದರು.
ಸಂಸದರ ಭರವಸೆ: ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ಉಸ್ತುವಾರಿ ಸಚಿವರ ಗಮನ ಸೆಳೆಯುತ್ತಿದ್ದ ಸಂದರ್ಭ ಮಧ್ಯಪ್ರವೇಶಿಸಿದ ಸಂಸದ ಪ್ರತಾಪ್ ಸಿಂಹ ಅವರು, ಈ ಸಂಬಂಧವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿಗೆ ಬೆಳೆಗಾರರ ನಿಯೋಗವನ್ನು ಕರೆದೊಯ್ಯುವುದರೊಂದಿಗೆ ಅವರೊಂದಿಗೆ ಸಮಾಲೋಚಿಸಿ ಅಗತ್ಯ ಪರಿಹಾರ ಒದಗಿಸುವುದಾಗಿಭರವಸೆ ನೀಡಿದರು.
ಸರಕಾರಕ್ಕೆ ಅಭಿನಂದನೆ ಸಲ್ಲಿಕೆ: ಸಹಕಾರ ಸಂಘದಲ್ಲಿ ಶೂನ್ಯ ಬಡ್ಡಿ ದರದ ಸಾಲ ನೀಡುವ ಕುರಿತಾಗಿ ಹೊಸದಾಗಿ ಹೊರಡಿಸಿರುವ ಸುತ್ತೋ¯ಯನ್ನು ರದ್ದು ಮಾಡಿ, ಯಥಾಸ್ಥಿತಿ ಮುಂದುವರೆಸಿರುವ ರಾಜ್ಯ ಸರಕಾರದ ಕ್ರಮಕ್ಕೆ ಬೆಳೆಗಾರ ಸಂಘಟನೆಗಳ ನಿಯೋಗ ಅಭಿನಂದನೆ ಸಲ್ಲಿಸಿತು.
ನಿಯೋಗದಲ್ಲಿ ಸರ್ವ ಬೆಳೆಗಾರ ಸಂಘಟನೆಗಳ ಸಂಸ್ಥೆ ಸಂಚಾಲಕರಾಗಿರುವ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಮಾತಂಡ ಸಿ. ಕಾರ್ಯಪ್ಪ, ಸಂಚಾಲಕ ಕೆ.ಕೆ ವಿಶ್ವನಾಥ್, ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ, ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ಆಣ್ಣೀರ ಹರೀಶ್ ಮಾದಪ್ಪ, ಕಾರ್ಯದರ್ಶಿ ಬೊಳ್ಳೇರ ರಾಜ ಸುಬ್ಬಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಕಾಳಿಮಾಡ ತಮ್ಮು ಮುತ್ತಣ್ಣ, ಸೋಮವಾರಪೇಟೆ ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಬೋಪಣ್ಣ, ಶನಿವಾರಸಂತೆ ಬೆಳೆಗಾರರ ಸಂಘದ ಪುಟ್ಟಸ್ವಾಮಿ ಮತ್ತಿತರರು ಹಾಜರಿದ್ದರು.
ಈ ಸಂದರ್ಭ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಉಪಸ್ಥಿತರಿದ್ದರು.