ಬೇಡಿಕೆ ಕುಸಿತ : ಹಸಿಮೆಣಸನ್ನು ಚರಂಡಿಗೆ ಸುರಿದ ಸೋಮವಾರಪೇಟೆ ರೈತ
15/06/2020

ಸೋಮವಾರಪೇಟೆ ಜೂ.15 : ಹಸಿಮೆಣಸನ್ನು ಕೊಳ್ಳುವರಿಲ್ಲದೆ ಆಕ್ರೋಶಗೊಂಡ ರೈತನೋರ್ವ ಹಸಿಮೆಣಸನ್ನು ಸಂತೆ ದಿನ ಚರಂಡಿಗೆ ಸುರಿದ ಘಟನೆ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ನಡೆದಿದೆ.
ಗಾಳಿ ಮಳೆಯಲ್ಲೇ ಹಸಿಮೆಣಸನ್ನು ಕೊಯ್ಲು ಮಾಡಿದ ರೈತ ಸುರೇಶ್, ಸೋಮವಾರ ಪಟ್ಟಣದ ಸಂತೆಗೆ ತಂದಿದ್ದರು. ಆದರೆ ಮೆಣಸನ್ನು ಖರೀದಿ ಮಾಡಲು ವ್ಯಾಪಾರಸ್ಥರು ಬರದ ಹಿನ್ನೆಲೆಯಲ್ಲಿ ಚರಂಡಿಗೆ ಸುರಿದಿದ್ದಾರೆ.
ಲಾಕ್‍ಡೌನ್‍ನಿಂದ ಹಸಿಮೆಣಸನ್ನು ಮಾರಾಟ ಮಾಡಲಾಗದೆ, ಫಸಲು ಹಾನಿಯಾಗಿತ್ತು. ಉಳಿದ ಮೆಣಸನ್ನು ಕೊಯ್ಲು ಮಾಡಿ ಮಾರಾಟಕ್ಕೆ ತಂದಿದ್ದೆ, ಆದರೆ ಕೇಳುವರಿಲ್ಲದೆ ಚರಂಡಿಗೆ ಸುರಿದೆ ಎಂದು ರೈತ ಸುರೇಶ್ ಹೇಳಿದರು. ಹಸಿಮೆಣಸು ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.