ಪಾಣತ್ತೂರಿಗೆ ಸಂಚಾರ ಸಂಪರ್ಕಕ್ಕೆ ಮನವಿ

17/06/2020

ಮಡಿಕೇರಿ ಜೂ.17 : ಕರಿಕೆ ಗ್ರಾಮದ ಗಡಿ ಭಾಗದಲ್ಲಿ ನೆರೆಯ ಕಾಸರಗೋಡು ಜಿಲ್ಲೆಯ ಪಾಣತ್ತೂರಿಗೆ ಸಂಚಾರ ಸಂಪರ್ಕ ಕಲ್ಪಿಸಿಕೊಡುವಂತೆ ಕರಿಕೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕರಿಕೆ ಗ್ರಾ.ಪಂ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ಮಾತನಾಡಿ, ಕೊಡಗಿನ ಗಡಿ ಗ್ರಾಮ ಕರಿಕೆ ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮಕ್ಕೆ ಹೊಂದಿಕೊಂಡಿದೆ. ಸುಮಾರು ಐದು ಸಾವಿರ ಮಂದಿ ಇರುವ ಗ್ರಾಮದಲ್ಲಿ ಶೇ.75 ರಷ್ಟು ಕಡು ಬಡವರು, ಹಿಂದುಳಿದವರು ವಾಸವಾಗಿದ್ದಾರೆ. ಅತೀ ಸಣ್ಣ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರೂ ಇದ್ದಾರೆ.
ಗ್ರಾಮಸ್ಥರು ಆಡಳಿತಾತ್ಮಕ ಸೌಲಭ್ಯಗಳನ್ನು ಭಾಗಮಂಡಲ ಮತ್ತು ಮಡಿಕೇರಿಯಿಂದ ಪಡೆದುಕೊಳ್ಳುತ್ತಿದ್ದು, ಉಳಿದ ಎಲ್ಲಾ ಅಗತ್ಯತೆಗಳನ್ನು ನೆರೆಯ ಪನತ್ತಡಿ ಗ್ರಾಮದ ವ್ಯಾಪ್ತಿಯಿಂದಲೇ ಪಡೆಯುತ್ತಿದ್ದಾರೆ. ಆರೋಗ್ಯದ ಸೌಲಭ್ಯಗಳಿಗಾಗಿ ಕೇರಳವನ್ನು ಮತ್ತು ಕಾಸರಗೋಡು ಮೂಲಕ ಸುಳ್ಯ, ಮಂಗಳೂರನ್ನು ಅವಲಂಬಿಸಿದ್ದಾರೆ.
ಪೆಟ್ರೋಲ್ ಬಂಕ್ ವ್ಯವಸ್ಥೆಗೂ ಪಾಣತ್ತೂರನ್ನು ಅವಲಂಬಿಸಲಾಗಿದೆ. ರಸ್ತೆ ಸಂಪರ್ಕ ಇಲ್ಲದಿರುವುದರಿಂದ ಕರಿಕೆಯಲ್ಲಿ ದಿನಸಿ ಪದಾರ್ಥಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಇದು ಜನಸಾಮಾನ್ಯರಿಗೆ ದೊಡ್ಡ ಹೊರೆಯಾಗಿದೆ.
ಆದ್ದರಿಂದ ಕರಿಕೆಯ ಗಡಿಯಲ್ಲಿ ಪೊಲೀಸರು ಸೂಕ್ತ ತಪಾಸಣೆಯನ್ನು ನಡೆಸಿ ಕೊರೋನಾ ತಡೆಗೆ ಅಗತ್ಯ ವ್ಯವಸ್ಥೆ ಮಾಡಿ ರಸ್ತೆ ಸಂಪರ್ಕವನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.
ಅಲ್ಲದೆ ಕರಿಕೆ ಗ್ರಾಮದ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಆಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಈ ಸಂದರ್ಭ ಪಂಚಾಯ್ತಿ ಪ್ರಮುಖರು ಹಾಜರಿದ್ದರು.