ವಾರಕ್ಕೂ ಮುಂಚೆ ಸಿಗಲಿದೆ ವಿದ್ಯಾರ್ಥಿ ನೋಂದಣಿ ಸಂಖ್ಯೆ, ಕೊಠಡಿ ಸಂಖ್ಯೆ ಮಾಹಿತಿ

18/06/2020

ಮಡಿಕೇರಿ ಜೂ.18 : ಜೂನ್ 25 ರಿಂದ ಆರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ 1,810 ವಿದ್ಯಾರ್ಥಿಗಳು ಹಾಗೂ ಜೊತೆಗೆ 50 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಪರೀಕ್ಷೆಗೆ ಕುಳಿತುಕೊಳ್ಳಬೇಕಾದ ವಿದ್ಯಾರ್ಥಿ ನೋಂದಣಿ ಸಂಖ್ಯೆ ಹಾಗೂ ಕೊಠಡಿಯ ಸಂಖ್ಯೆಯನ್ನು ಒಂದು ವಾರ ಮುಂಚಿತವಾಗಿಯೇ ನೀಡಲು ಇಲಾಖೆ ನಿರ್ಧರಿಸಿದೆ.
ಪ್ರತಿ ಬಾರಿ ಒಂದು ವಾರದ ಮುಂಚೆ ಪರೀಕ್ಷಾ ಪ್ರವೇಶ ಪತ್ರಗಳನ್ನು ನೀಡಲಾಗುತ್ತಿತ್ತು. ಪರೀಕ್ಷೆಯ ಹಿಂದಿನ ದಿನ ರಾತ್ರಿ ಪರೀಕ್ಷಾ ಸಂಖ್ಯೆ, ಬ್ಲಾಕ್‍ಗಳ ಸಂಖ್ಯೆಯ ಲಿಸ್ಟ್ ಅಂಟಿಸಲಾಗುತ್ತಿತ್ತು. ಪರೀಕ್ಷೆ ಆರಂಭವಾಗುವ ಮುನ್ನ ಪಾಲಕರು ಹಾಗೂ ವಿದ್ಯಾರ್ಥಿಗಳು ತಮ್ಮ ಕೊಠಡಿ, ಸೀಟ್ ಸಂಖ್ಯೆ ಖಚಿತ ಮಾಡಿಕೊಳ್ಳಲು ತಡಕಾಡಬೇಕಿತ್ತು. ಆದರೆ, ಈ ಬಾರಿ ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಮಕ್ಕಳು ಗುಂಪುಗೂಡುವುದನ್ನು ತಪ್ಪಿಸಲು ಹಾಗೂ ಪಾಲಕರು ಹತ್ತಿರ ಬರದಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆ ಹೊಸ ಉಪಾಯ ಮಾಡಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಹಿತದೃಷ್ಠಿಯಿಂದ ಯಾವ ವಿದ್ಯಾರ್ಥಿ, ಯಾವ ಬ್ಲಾಕ್‍ನಲ್ಲಿ, ಎಷ್ಟನೇ ಸೀಟ್‍ನಲ್ಲಿ ಕುಳಿತುಕೊಳ್ಳಬೇಕು ಎಂಬ ಮಾಹಿತಿಯನ್ನು ವಾರ ಮುಂಚಿತವೇ ನೀಡಲಿದೆ.
ಹಾಲ್ ಟಿಕೆಟ್‍ಗಳು ಬಂದ ನಂತರ, ಆಯಾಯ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮಲ್ಲಿರುವ ಮಕ್ಕಳ ರಿಜಿಸ್ಟರ್ ಸಂಖ್ಯೆ ಆದರಿಸಿ ಅವರ ಬ್ಲಾಕ್‍ನ ಮಾಹಿತಿ ನಿರ್ಧರಿಸುತ್ತಾರೆ. ವಿದ್ಯಾರ್ಥಿ ಹಾಗೂ ಅವರ ಪಾಲಕರ ಮೊಬೈಲ್‍ಗಳಿಗೆ ಇದರ ಪೂರ್ಣ ಮಾಹಿತಿ ರವಾನಿಸಿ, ಖಚಿತ ಮಾಡಿಕೊಳ್ಳಬೇಕು. ಹಾಗಾಗಿ, ಶಾಲೆ ಯಾವುದು? ಬ್ಲಾಕ್ ಯಾವುದು? ಸೀಟ್ ಯಾವ ಕೊಠಡಿಯಲ್ಲಿ ನಿಗದಿಯಾಗಿರುತ್ತದೆ ಎಂಬ ಬಗ್ಗೆ ಪರೀಕ್ಷಾರ್ಥಿ ಹಾಗೂ ಪಾಲಕರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮಡಿಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಾಯತ್ರಿ ಟಿ.ಎನ್ ತಿಳಿಸಿದ್ದಾರೆ.
ಪ್ರತಿ ಪರೀಕ್ಷಾ ಕೇಂದ್ರಕ್ಕೂ ಒಂದು ಕಾರ್ಯಪಡೆ: ಪರೀಕ್ಷಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಅಂತರ ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ ಪ್ರತಿ ಕೇಂದ್ರಕ್ಕೂ ಐವರು ಸದಸ್ಯರ ಒಂದು ಕಾರ್ಯಪಡೆ ರಚಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಲು ಇಬ್ಬರು ಸರ್ಕಾರಿ ನರ್ಸ್, ಸ್ಯಾನಿಟೈಸರ್ ನೀಡಿ ಕೈ ತೊಳೆಸಲು ಇಬ್ಬರು ಸ್ಕೌಟ್ಸ್-ಗೈಡ್ಸ್, ಎನ್‍ಸಿಸಿ ಮಾರ್ಗದರ್ಶಕರು, ಮೊಬೈಲ್ ಇತರ ಎಲೆಕ್ಟ್ರಾನಿಕ್ ಉಪಕರಣ ತಪಾಸಣೆಗೆ ಒಬ್ಬ ಮೊಬೈಲ್ ಸ್ವಾಧೀನಾಧಿಕಾರಿ ಈ ತಂಡದಲ್ಲಿ ಇರುತ್ತಾರೆ. ಇವರಿಗೆ ಸಹಕಾರಿ ಆಗಿ ಮತ್ತೆ ಮೂವರನ್ನು ಹೆಚ್ಚುವರಿಯಾಗಿ ನೇಮಿಸಲಾಗಿದೆ.
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಸಹಾಯಕ್ಕೆ ಇವರು ಇರುತ್ತಾರೆ. ಪಾಲಕರು ಶಾಲೆಗಳ ಹತ್ತಿರ ಬಂದು ಮಕ್ಕಳೊಂದಿಗೆ ಗುಂಪುಗೂಡಿ ನಿಲ್ಲದಂತೆ ಇವರು ನೋಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಈ ಟಾಸ್ಕ್‍ಫೆÇೀರ್ಸ್ ಸಮಿತಿಯ ಸದಸ್ಯರ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳಲು ಮಡಿಕೇರಿ ತಾಲೂಕಿನ 8 ಪರೀಕ್ಷಾ ಮೇಲ್ವಿಚಾರಕರಿಗೆ ಅನುಮತಿ ನೀಡಲಾಗಿದೆ ಎಂದು ಮಡಿಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಟಿ.ಎನ್ ಅವರು ತಿಳಿಸಿದ್ದಾರೆ. ಪ್ರತಿ ಕೇಂದ್ರದಲ್ಲೂ ಮೈಕ್ ವ್ಯವಸ್ಥೆ ಮಾಡಲಾಗುತ್ತಿದ್ದು, ಒಬ್ಬರಿಗೊಬ್ಬರು ಪದೇಪದೇ ಹತ್ತಿರ ಬರುವುದನ್ನು ತಪ್ಪಿಸಲು ಇದರ ಮೂಲಕ ಸಂದೇಶಗಳನ್ನು ರವಾನಿಸಲಾಗುತ್ತದೆ.