ಕೊರೋನಾ ವೈರಸ್ ನಿಯಂತ್ರಣ : ಹೊರ ಜಿಲ್ಲೆ, ರಾಜ್ಯ, ವಿದೇಶದಿಂದ ಆಗಮಿಸುವ ಪ್ರವಾಸಿಗರ ಆನ್‍ಲೈನ್, ಆಫ್‍ಲೈನ್ ಕಾಯ್ದಿರಿಸದಂತೆ ಆದೇಶ

07/07/2020

ಮಡಿಕೇರಿ ಜು. 7 : ಕೊಡಗು ಜಿಲ್ಲೆಗೆ ಹೊರ ಜಿಲ್ಲೆ, ಹೊರ ರಾಜ್ಯ ಮತ್ತು ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಆನ್‍ಲೈನ್/ ಆಫ್‍ಲೈನ್ ಮತ್ತಿತರ ಯಾವುದೇ ರೂಪದ ಬುಕಿಂಗ್ ಸ್ವೀಕರಿಸಬಾರದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಆಗಮಿಸಿ ವಸತಿ ಸೌಕರ್ಯ ಹೊಂದಿರುವ ಪ್ರವಾಸಿಗರನ್ನು ಬಲವಂತವಾಗಿ ಕಳುಹಿಸದೆ, ಅವರು ವಾಸ್ತವ್ಯಕ್ಕೆ ಕಾಯ್ದಿರಿಸಿದ ಅವಧಿ ಪೂರ್ಣಗೊಳ್ಳುವವರೆಗೆ ಕಾಯುವುದು ಮತ್ತು ಅವಧಿಯನ್ನು ವಿಸ್ತರಿಸಬಾರದು.
ಪ್ರವಾಸಿ ಉದ್ದೇಶಕ್ಕೆ ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿ, ಆಗಮಿಸದಿದ್ದಲ್ಲಿ ಅವರು ಆಗಮಿಸುವ ಮುಂಚಿತವಾಗಿ ಸೂಕ್ತ ಮಾಹಿತಿ ನೀಡಿ ಬುಕ್ಕಿಂಗ್ ರದ್ದುಪಡಿಸುವುದು.
ತುರ್ತು/ ವೈದ್ಯಕೀಯ/ ಅನಿವಾರ್ಯ ಪರಿಸ್ಥಿತಿಯಲ್ಲಿ ಜಿಲ್ಲೆಗೆ ಆಗಮಿಸುವವರಿಗೆ ನಿರ್ಬಂಧವಿರುವುದಿಲ್ಲ. ಆದರೆ ಈ ರೀತಿ ಆಗಮಿಸಿದ್ದಲ್ಲಿ ಅವರು ಆಗಮಿಸಿದ ಕಾರಣದ ಪೂರ್ಣ ವಿವರವನ್ನು ಪಡೆದು ವಸತಿ ಸೌಕರ್ಯ ನೀಡುವುದು ಮತ್ತು ಈ ಬಗ್ಗೆ ಸ್ಥಳೀಯ ಕಾರ್ಯವ್ಯಾಪ್ತಿಯ ಆರಕ್ಷಕ ಠಾಣೆ/ ನಗರ ಸ್ಥಳೀಯ ಸಂಸ್ಥೆ/ ಗ್ರಾ.ಪಂಗಳಿಗೆ ಮಾಹಿತಿ ನೀಡಬೇಕು.
ಈ ಆದೇಶ ಉಲ್ಲಂಘನೆ ಮಾಡಿದಲ್ಲಿ ಭಾರತೀಯ ದಂಡ ಸಂಹಿತೆ 1860 ರ ಕಲಂ 188 ರ ಪ್ರಕಾರ ದಂಡನೀಯವಾಗಿದ್ದು, ಕಡ್ಡಾಯವಾಗಿ ಈ ಆದೇಶಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.