ದೇಶಿ ಉತ್ಪನ್ನಗಳಿಂದಲೇ ಸೋಂಕು ಪತ್ತೆ

July 8, 2020

ಬೆಂಗಳೂರು ಜು.8 : ವಿದೇಶಗಳಿಂದ ಮಾತ್ರ ಆಮದು ಮಾಡಿಕೊಂಡು ಕೋವಿಡ್- 19 ಸೋಂಕು ಪತ್ತೆ ಮಾಡುವ ಅತ್ಯಾಧುನಿಕ ಎದೆ ಎಕ್ಸರೆ ಸೇರಿ ಆರು ಪ್ರಮುಖ ಉತ್ಪನ್ನಗಳನ್ನು ಇದೀಗ ದೇಶಿಯವಾಗಿ, ಬೆಂಗಳೂರಿನ ಕನ್ನಡದ ವಿಜ್ಞಾನಿಗಳು ಮತ್ತು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ. ಇದರೊಂದಿಗೆ ಕೋವಿಡ್ ವಿರುದ್ಧದ ಸಮರದಲ್ಲಿ ರಾಜ್ಯಕ್ಕೆ ಮಹತ್ವದ ಮುನ್ನಡೆ ಸಿಕ್ಕಿದಂತಾಗಿದೆ.
ರಾಜ್ಯದ ಐಟಿ- ಬಿಟಿ ಇಲಾಖೆ ವ್ಯಾಪ್ತಿಯ ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದ ಅಡಿಯಲ್ಲಿ ಸಂಶೋಧನೆಯಲ್ಲಿ ನಿರತವಾಗಿರುವ ವಿವಿಧ ಸ್ಟಾರ್ಟ್‍ಅಪ್ ಗಳು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ. ಇದರಿಂದಾಗಿ ನಾವು ಬಹುತೇಕ ವಿದೇಶಿ ಅವಲಂಬನೆಯನ್ನು ತಗ್ಗಿಸಬಹುದಾಗಿದ್ದು, ಜತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ ಪರಿಕಲ್ಪನೆಯ ಸ್ಫೂರ್ತಿಗೆ ಮನ್ನಣೆ ದೊರೆತಂತಾಗಿದೆ ಎಂದು ಐಟಿ-ಬಿಟಿ ಇಲಾಖೆಯ ಜವಾಬ್ದಾರಿ ಹೊತ್ತಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.