ಪ್ರಥಮ ಹಾಗೂ ದ್ವೀತಿಯ ಪದವಿ ಪರೀಕ್ಷೆಗಳು ರದ್ದು : ಎಐಡಿಎಸ್‍ಓ ಸ್ವಾಗತ

10/07/2020

ಮಡಿಕೇರಿ ಜು. 10 : ಇಂಜಿನಿಯರಿಂಗ್ ಮತ್ತು ಪದವಿ ಕೋರ್ಸುಗಳ ಅಂತಿಮ ವರ್ಷದ ಕೋರ್ಸ್‍ಗಳನ್ನು ಹೊರತು ಪಡಿಸಿ ಇನ್ನೂಳಿದ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಸರ್ಕಾರದ ಆದೇಶ ಹೊರಡಿಸಿದ್ದು, ಇದು ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ ಎಂದು ಎಐಡಿಎಸ್‍ಓ ಕೊಡಗು ಜಿಲ್ಲಾ ಸಂಚಾಲಕ ಸುಭಾಷ್ ಹೇಳಿದರು.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಅಪಾಯಕಾರಿಯಾಗಿತ್ತು. ಅಲ್ಲದೇ ಹಲವು ಕಾಲೇಜುಗಳಲ್ಲಿ ಪಠ್ಯಕ್ರಮ ಪೂರ್ಣಗೊಂಡಿರಲಿಲ್ಲ ಮತ್ತು ಆನ್ ಲೈನ್ ಶಿಕ್ಷಣ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳನ್ನು ಮಾತ್ರ ತಲುಪಿತ್ತು.
ಇಂತಹ ಸಂದರ್ಭದಲ್ಲಿ ಎಐಡಿಎಸ್‍ಓ ಸಂಘಟಿಸಿದ ಸಮೀಕ್ಷೆಯಲ್ಲಿ ಶೇ 90ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ತಯಾರಾಗಿರಲಿಲ್ಲ. ಆದ್ದರಿಂದ ಮುಖ್ಯ ಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಆನ್ ಲೈನ್ ಶಿಕ್ಷಣದ ಆಧಾರದ ಮೇಲೆ ಪರೀಕ್ಷೆ ನಡೆಸಬಾರದೆಂದು ಎಐಡಿಎಸ್‍ಓ ಮನವಿ ಸಲ್ಲಿಸಿ ಆಗ್ರಹಿಸಿತ್ತು.
ಇದನ್ನು ಪರಿಗಣಿಸಿದ ಸಚಿವರು ಫೇಸ್ಬುಕ್ ಲೈವ್‍ನಲ್ಲಿ ಇಂಜಿನಿಯರಿಂಗ್ ಮತ್ತು ಪದವಿ ಕೋರ್ಸುಗಳ ಅಂತಿಮ ವರ್ಷದ ಕೋರ್ಸ್‍ಗಳನ್ನು ಹೊರತು ಪಡಿಸಿ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಆದೇಶ ಹೊರಡಿಸಿರುವುದು ಸ್ವಾಗತರ್ಹ. ಮುಂದಿನ ದಿನಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸರ್ಕಾರ ಅವರ ಮುಂದಿನ ಜೀವನದ ಸಂಪೂರ್ಣ ಜವಾಬ್ದಾರಿ ವಹಿಸಬೇಕು ಮತ್ತು ಎಲ್ಲಾ ರೀತಿಯ ಮುಂಜಾಗ್ರತೆಯೊಂದಿಗೆ ಪರೀಕ್ಷೆ ನಡೆಸಿ ಅವರಿಗೆ ಉದ್ಯೋಗ ಖಾತ್ರಿ ಪಡಿಸಬೇಕೆಂದು ಸುಭಾಷ್ ಆಗ್ರಹಿಸಿದರು.