ಹಲವು ಸಮಸ್ಯೆಗೆ ರಾಮಬಾಣ ತುಂಬೆ ಗಿಡ

15/07/2020

ತುಂಬೆ ಒಂದು ಪುಟ್ಟ ಗಿಡ. ಇದು ಹೆಚ್ಚಾಗಿ ಬಿಳಿಯ ಬಣ್ಣದ ಹೂಗಳನ್ನು ಬಿಡುತ್ತದೆ ಜೊತೆಗೆ ಅಪರೂಪಕ್ಕೆ ಬಣ್ಣದ ತುಂಬೆ ಹೂಗಳೂ ಅಲ್ಲಲ್ಲಿ ಕಂಡುಬರುತ್ತವೆ. ಇದರ ರೆಂಬೆ ಮತ್ತು ಕಾಂಡವು ತುಂಬ ಮೃದುವಾಗಿದ್ದು ಸಲೀಸಾಗಿ ಬಾಗುವಂತಹ ರಚನೆಯಿರುತ್ತದೆ. ಇದರ ಎಲೆಗಳು ತೆಳುವಾಗಿದ್ದು ಉದ್ದವಾಗಿರುತ್ತವೆ. ಇದರ ಬೇರುಗಳು ಭೂಮಿಯಲ್ಲಿ ಹೆಚ್ಚು ಆಳಕ್ಕಿಳಿಯದೆ ಮೇಲ್ಮಟ್ಟದಲ್ಲೇ ಇರುತ್ತವೆ.
ಇದು ಸದಾಕಾಲದಲ್ಲಿಯು ಹೆಚ್ಚು ನೀರಿನ ಒರತೆಯಿಲ್ಲದಿದ್ದರೂ ತಾನಾಗೇ ಯಥೇಚ್ಛವಾಗಿ ಹುಟ್ಟಿ ಬೆಳೆಯುತ್ತದೆ. ಇದು ವೈಜ್ಞಾನಿಕ ಮತ್ತು ಸಾಮಾಜಿಕವಾಗಿ ಔಷಧೀಯ ಸಸ್ಯವಾಗಿ ಗಣಿಸಲ್ಪಟ್ಟಿದೆ. ಈ ಸಸ್ಯವು ಸಾಮಾನ್ಯವಾಗಿ ಭಾರತದಾದ್ಯಂತ ಮತ್ತು ಜಾವಾ, ಮಾರಿಷಸ್, ಫಿಲಿಪೈನ್ಸ್, ಶ್ರೀಲಂಕ ಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಇದರ ಎಲೆಗಳನ್ನು ಬಹಳ ಕಾಲದವರೆಗೆ ಹಾವು ಕಡಿತಕ್ಕೆ ಔಷಧವಾಗಿ ಬಳಸುವುದೂ ವಾಡಿಕೆಯಲ್ಲಿತ್ತು

ಜ್ವರಕ್ಕೆ ರಾಮಬಾಣ
ಸಾಮಾನ್ಯ ಶೀತ-ಜ್ವರ ಕಾಣಿಸಿದಾಗ 10ml ತುಂಬೆ ರಸಕ್ಕೆ ಚಿಟಿಕೆಯಷ್ಟು ಕರಿಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ ಸೇವಿಸಿದರೆ ಜ್ವರ ಕಡಿಮೆಯಾಗುವುದು.

ಅಲರ್ಜಿ ಸಮಸ್ಯೆಗೆ ಮನೆಮದ್ದು
ಅಲರ್ಜಿ ಸಮಸ್ಯೆ ಕಂಡು ಬಂದರೆ ಸ್ವಲ್ಪ ತುಂಬೆ ಎಲೆಯನ್ನು ನೀರಿಗೆ ಹಾಕಿ ಕುದಿಸಿ ಕುಡಿಯಬೇಕು ಹಾಗೂ ತುಂಬೆರಸವನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ಅಲರ್ಜಿ ಕಮ್ಮಿಯಾಗುವುದು.

ಜಂತು ಹುಳು ನಿವಾರಣೆಗೆ
ಮಕ್ಕಳಲ್ಲಿ ಜಂತುಹುಳುವಿನ ಸಮಸ್ಯೆ ನಿವಾರಿಸಲು ಇದನ್ನು ಮನೆಮದ್ದಾಗಿ ಬಳಸಬಹುದು. ತುಂಬೆ ಹೂ ಹಾಗೂ ಎಲೆಯನ್ನು ಜಜ್ಜಿ ಅದರ ರಸಕ್ಕೆ 2 ಹನಿ ಜೇನುತುಪ್ಪ ಬೆರೆಸಿ ಕುಡಿಸಿದರೆ ಮಕ್ಕಳಿಗೆ ಹೊಟ್ಟೆನೋವು ಕಾಡುವುದಿಲ್ಲ.

ಶೀತ-ತಲೆನೋವು
ಶೀತದಿಂದ ಮೂಗು ಕಟ್ಟಿದ್ದಂತಾಗಿ ತಲೆನೋವು ಉಂಟಾದರೆ ತುಂಬೆಗಿಡದ ಕಾಂಡವನ್ನು ನೀರಿನಲ್ಲಿ ಕುದಿಸಿ ಅದರ ಹಬೆ ತೆಗೆದುಕೊಂಡರೆ ರಿಲೀಫ್‌ ಅನಿಸುವುದು.

ಕಣ್ಣಿನ ಅಲರ್ಜಿಗೆ
ಕಣ್ಣಿನಲ್ಲಿ ತುರಿಕೆ, ನೀರು ಬರುವ ಸಮಸ್ಯೆ ಕಂಡು ಬಂದರೆ ತುಂಬೆಗಿಡದ ರಸಕ್ಕೆ ಅಕ್ಕಿತೊಳೆದ ನೀರನ್ನು ಬೆರೆಸಿ ಕಣ್ಣು ತೊಳೆದರೆ ಕಣ್ಣಿಗೆ ತುಂಬಾ ಒಳ್ಳೆಯದು.

ಜೀರ್ಣಕ್ರಿಯೆಗೆ ಒಳ್ಳೆಯದು
15ml ತುಂಬೆಗಿಡದ ಕಷಾಯಕ್ಕೆ ಸೈಂಧವ 2-3 ಗ್ರಾಂ ಉಪ್ಪು ಸೇರಿಸಿ ದಿನದಲ್ಲಿ ಎರಡು ಬಾರಿ ಸೇವಿಸಿದರೆ ಅಜೀರ್ಣ ಸಮಸ್ಯೆ ಕಾಡುವುದಿಲ್ಲ.