ಸೋಮವಾರಪೇಟೆಯಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆ

ಮಳೆ ಕೊರತೆ ನಡುವೆಯೇ ಸೋಮವಾರಪೇಟೆಯಲ್ಲಿ ಕೃಷಿ ಚಟುವಟಿಕೆ ಚುರುಕು
ಮಡಿಕೇರಿ ಜು.15 : ಸೋಮವಾರಪೇಟೆ ತಾಲ್ಲೂಕಿನಲ್ಲಿ ಕೃಷಿ ಕಾರ್ಯ ವೇಗ ಚುರುಕುಗೊಂಡಿದ್ದು, ಗದ್ದೆ, ಹೊಲಗಳನ್ನು ಹದಗೊಳಿಸುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಆದರೆ ಈ ಬಾರಿ ಕೃಷಿ ಕಾಲದಲ್ಲಿ ಮುಂಗಾರು ಕೈ ಕೊಟ್ಟಿದ್ದು, ಸೋಮವಾರಪೇಟೆಯಲ್ಲಿ ಬಿಸಿಲಿನ ವಾತಾವರಣವಿದೆ. ಅನಿವಾರ್ಯವಾಗಿ ರೈತರು ಕೃಷಿಗಾಗಿ ಕೊಳವೆ ಬಾವಿ, ಕೆರೆ, ಹೊಳೆಗಳ ನೀರನ್ನು ಅವಲಂಬಿಸಿದ್ದಾರೆ.
ಮಳೆಯಾಶ್ರಿತ ಪ್ರದೇಶಗಳಲ್ಲಿ ದೀರ್ಘಾವಧಿ ಭತ್ತ ತಳಿಗಳ ನಾಟಿ ಕೆಲಸ ಜುಲೈ ತಿಂಗಳಿನಲ್ಲಿ ಮುಕ್ತಾಯಗೊಳ್ಳುತ್ತದೆ. ಆದರೆ ನಿರೀಕ್ಷೆಯಷ್ಟು ಮಳೆಯಾಗದ ಕಾರಣ ನಾಟಿ ಕೆಲಸಕ್ಕೆ ಅಡಚಣೆಯಾಗಿದ್ದು, ಬಹುತೇಕರು ಕೊಳವೆಬಾವಿ ಮೂಲಕ ನೀರು ಹಾಯಿಸಿ ನಾಟಿ ಕಾರ್ಯ ಆರಂಭಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದ ರೈತರು ಇದೀಗ ಕೊರೋನಾ ಸೋಂಕು, ಲಾಕ್‍ಡೌನ್ ಸಂಕಷ್ಟದ ನಡುವೆಯೇ ಕೃಷಿಯೆಡೆಗೆ ಒಲವು ತೋರುತ್ತಿದ್ದಾರೆ. ಆದರೆ ಸಕಾಲದಲ್ಲಿ ಮಳೆಯಾಗದಿರುವುದು ಚಿಂತೆಗೀಡು ಮಾಡಿದೆ.
ಕೊಡ್ಲಿಪೇಟೆ, ಶನಿವಾರಸಂತೆ, ಕಸಬ ಹೋಬಳಿಯ ಹೆಚ್ಚಿನ ರೈತರು ಕೊಳವೆಬಾವಿಗಳ ನೀರನ್ನು ನಂಬಿ ನಾಟಿ ಕೆಲಸಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಶಾಂತಳ್ಳಿ ಹಾಗೂ ಸುಂಟಿಕೊಪ್ಪ ಹೋಬಳಿಗಳಲ್ಲಿ ಹೊಳೆ, ಕೊಲ್ಲಿ ನೀರನ್ನು ಬಳಸಿಕೊಳ್ಳುತ್ತಿದ್ದಾರೆ.
ತಾಲೂಕಿನ 11,600 ಹೆಕ್ಟೇರ್ ಭತ್ತ ಭೂಮಿಯಲ್ಲಿ ಪ್ರಸಕ್ತ ವರ್ಷ 10ಸಾವಿರ
ಹೆ. ನಲ್ಲಿ ಭತ್ತ ಬೆಳೆಯಲು ಗುರಿ ಹೊಂದಲಾಗಿದೆ. 7600ಹೆ. ಮಳೆಯಾಶ್ರಿತ
ಭತ್ತ ಭೂಮಿ, ಹಾರಂಗಿ ಹಾಗೂ ಚಿಕ್ಲಿಹೊಳೆ ಅಚ್ಚುಕಟ್ಟು ಪ್ರದೇಶದಲ್ಲಿ 2400ಹೆ. ಭತ್ತ ಬೆಳೆಯುವ ಭೂಮಿಯಿದೆ.
ಕಳೆದ ವರ್ಷ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತಾದರೂ 9240 ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತವನ್ನು ಬೆಳೆಯಲಾಗಿತ್ತು. ಈ ಬಾರಿ 9500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್.ಎಸ್.ರಾಜಶೇಖರ್ ತಿಳಿಸಿದ್ದಾರೆ.
ನಾಟಿ ಮಾಡಿದವರು ಬೆಂಕಿರೋಗ ಹಾಗೂ ಕೀಟ ಹತೋಟಿಗೆ ಸೂಕ್ತ ಕ್ರಮಕೈಗೊಳ್ಳಬೇಕು. ಬೆಂಕಿರೋಗ ಹತೋಟಿಗೆ 100ಲೀಟರ್ ನೀರಿಗೆ 100ಗ್ರಾಂ ಬೆವಾಸ್ಟಿನ್ ಮಿಶ್ರಣ ಮಾಡಿ ಸಿಂಪಡಿಸಬೇಕು. ಕೀಟ ಹತೋಟಿಗೆ 200ಲೀ. ನೀರಿಗೆ 100ಗ್ರಾಂ ಕ್ಲೊರೋಫೈರಿಪಾಸ್ ಮಿಶ್ರಣ ಮಾಡಿ ಸಿಂಪಡಿಸುವಂತೆ ಸಲಹೆ ನೀಡಿದ್ದಾರೆ.
ಸ್ಥಳೀಯ ರೈತ ಎಚ್.ಈ.ರಮೇಶ್ ಮಾತನಾಡಿ ಕೃಷಿ ಕಾರ್ಮಿಕರ ಸಮಸ್ಯೆ, ಉತ್ಪಾದನಾ ವೆಚ್ಚ ದುಬಾರಿಯಾದರೂ ಭತ್ತ ಬೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಈ ಬಾರಿ ಮಳೆ ಕೈಕೊಟ್ಟಿದೆ, ಕೊಳವೆ ಬಾವಿಗಳು, ಕೆರೆಗಳು ಅನ್ನದಾತರನ್ನು ಕಾಪಾಡುತ್ತಿವೆ. ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳು ಯಾವುದೇ ಷರತ್ತಿಲ್ಲದೆ ಸಿಗುವಂತಾಗಬೇಕು ಎಂದು ತಿಳಿಸಿದ್ದಾರೆ.
ವರದಿ : ಲಕ್ಷ್ಮೀಕಾಂತ್ ಕೋಮರಪ್ಪ




