ಹಾರಂಗಿ ಜಲಾಶಯದಿಂದ ನೀರು ಬಿಡುಗಡೆ

July 17, 2020

ಮಡಿಕೇರಿ ಜು. 17 : ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಪ್ರಮುಖ ಜಲಾಶಯ ಹಾರಂಗಿ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‍ಗಳ ಮೂಲಕ ನೀರನ್ನು ಹೊರ ಬಿಡಲಾಗಿದೆ.
ಬೆಳಗ್ಗೆ ಜಲಾಶಯದ ಕ್ರಸ್ಟ್ ಗೇಟ್‍ಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಪೂಜೆ ಸಲ್ಲಿಸುವುದರೊಂದಿಗೆ ಸೈರನ್ ಮೊಳಗಿಸುವ ಮೂಲಕ 2500 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು. ಈ ಬಾರಿ ಅವಧಿಗೆ ಮೊದಲೇ ಹಾರಂಗಿ ಭರ್ತಿಯಾಗುವ ಲಕ್ಷಣ ಗೋಚರಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಳಹರಿವಿನ ಶೇ.40ರಷ್ಟು ನೀರನ್ನು ಕಳೆದ ಒಂದು ವಾರದಿಂದ ಜಲ ವಿದ್ಯುತ್ ಘಟಕದ ಮೂಲಕ ನದಿಗೆ ಹರಿಸಲಾಗುತ್ತಿತ್ತು. ಆದರೆ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಶುಕ್ರವಾರ ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ನಾಲ್ಕು ಕ್ರಸ್ಟ್ ಗೇಟ್‍ಗಳ ಮೂಲಕ ನೀರನ್ನು ಹೊರ ಬಿಡಲಾಗಿದೆ.
ಗರಿಷ್ಠ 2859 ಅಡಿ ಸಾಮಥ್ರ್ಯದ ಹಾರಂಗಿ ಜಲಾಶಯದಲ್ಲಿ ಪ್ರಸಕ್ತ 2853.17 ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 4864 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾದಂತೆ ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣವೂ ಹೆಚ್ಚಾಗಲಿದ್ದು, ನದಿ ದಂಡೆಯಲ್ಲಿರುವ ಸಾರ್ವಜನಿಕರು ಎಚ್ಚರದಿಂದಿರುವಂತೆ ಅಣೆಕಟ್ಟೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ಸಾಮಾನ್ಯವಾಗಿ ಜಲಾಶಯದ ಒಟ್ಟು ಸಾಮಥ್ರ್ಯದ ನೀರು ಭರ್ತಿಯಾಗಲು ಎರಡು ಅಡಿಗಳಿರುವ ಸಂದರ್ಭದಲ್ಲಿ ಅಣೆಕಟ್ಟೆಯಿಂದ ಕ್ರಸ್ಟ್ ಗೇಟ್‍ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಹಾರಂಗಿ ಮತ್ತು ಕಾವೇರಿ ನದಿಗಳ ನೀರಿನ ಪ್ರಮಾಣ ಅಧಿಕಗೊಂಡು ಪ್ರವಾಹ ಪರಿಸ್ಥಿತಿ ತಲೆದೋರಿ ಅನಾಹುತ ಸಂಭವಿಸಿತ್ತು. ಕುಶಾಲನಗರ ಸೇರಿದಂತೆ ನದಿ ದಡದ ಗ್ರಾಮಗಳು ಜಲಾವೃತಗೊಂಡು ಸಾಕಷ್ಟು ನಷ್ಟವಾದ ಹಿನ್ನೆಲೆಯಲ್ಲಿ ಈ ಬಾರಿ ಜಲಾಶಯ ಭರ್ತಿಯಾಗಲು ಇನ್ನೂ 6 ಅಡಿ ಬಾಕಿ ಇರುವಾಗಲೇ ನೀರು ಹೊರಬಿಡಲಾಯಿತು. ಕಳೆದ ವರ್ಷ ಆಗಸ್ಟ್ 9 ರಂದು ಜಲಾಶಯ ಭರ್ತಿಯಾಗಿ ನೀರನ್ನು ಹೊರಬಿಡಲಾಗಿತ್ತು.