ದಾಖಲೆ ಸಹಿತ ಸಮರ್ಥಿಸಿಕೊಳ್ಳಲಿ

21/07/2020

ಬೆಂಗಳೂರು ಜು.21 : ಕೊರೋನಾ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ಕುರಿತು ತಾವು ಮಾಡಿರುವ ಆರೋಪಗಳ ಬಗ್ಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟನೆಗೆ ತಿರುಗೇಟು ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಾಯಿ ಮಾತಿನ ಲೆಕ್ಕವನ್ನು ಒಪ್ಪುವುದಿಲ್ಲ. ದಾಖಲೆ ಸಮೇತ ಸಮರ್ಥಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಪರಿಕರಗಳ ಖರೀದಿ ವಿಚಾರದಲ್ಲಿ ಸ್ಪಷ್ಟನೆ ಇಲ್ಲ. ಏನೇನು ಖರೀದಿ ಮಾಡಲಾಗಿದೆ ಎಷ್ಟೆಷ್ಟು ಖರ್ಚು ಮಾಡಲಾಗಿದೆ ಎಂಬ ಲೆಕ್ಕ ನೀಡಬೇಕು. ಸುಮ್ಮನೆ ಇವರು ಬಾಯಿ ಮಾತಲ್ಲಿ ಹೇಳಿದರೆ ಹೇಗೆ?. ಇದಕ್ಕೆ ತಕ್ಕ ದಾಖಲೆಗಳನ್ನು ತೋರಿಸಬೇಕು ಎಂದರು.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಅವರು ತಮಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಅವ್ಯವಹಾರ ಆರೋಪ ಸಾಬೀತುಪಡಿಸಿದರೆ ರಾಜೀನಾಮೆ ನೀಡುತ್ತೇನೆಂದು ಬಾಯಿ ಮಾತಿನಲ್ಲಿ ಕೇಳಿರುವುದು ಸರಿಯಲ್ಲ. ರಾಜೀನಾಮೆ ಕೊಡಬೇಕಾದರೆ ಮಂತ್ರಿಯಾಗಿ ಯಾಕೆ ಮುಂದುವರೆದಿದ್ದಾರೆ. ನಮಗೆ ದಾಖಲೆಗಳ ಸಮೇತ ಲೆಕ್ಕ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.