ಪ್ರವಾಹ ಮರುಕಳಿಸದಂತೆ ಕಾರ್ಯಯೋಜನೆ : ಸಚಿವ ವಿ. ಸೋಮಣ್ಣ ಭರವಸೆ

ಮಡಿಕೇರಿ ಆ. 8 : ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿ ಪ್ರವಾಹದಿಂದ ಜಲಾವೃತಗೊಂಡ ಬಡಾವಣೆಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಮೂರು ದಿನಗಳಿಂದ ನೀರಿನಿಂದ ನೂರಾರು ಮನೆಗಳು ಪ್ರವಾಹದಿಂದ ಮುಳುಗಿದ್ದು ಸಂತ್ರಸ್ಥರ ಅಹವಾಲನ್ನು ಆಲಿಸಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಶ್ವತ ಪರಿಹಾರ ಕಂಡುಹಿಡಿಯುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮತ್ತೆ ಪ್ರವಾಹ ಮರುಕಳಿಸದಂತೆ ಕಾರ್ಯಯೋಜನೆ ಸಿದ್ದಪಡಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಕೆಲವು ತಿಂಗಳ ಹಿಂದೆ ಸ್ಥಳೀಯರ ಆಗ್ರಹದ ಮೇರೆಗೆ ಕ್ಷೇತ್ರ ಶಾಸಕರ ಮೂಲಕ ಕಾವೇರಿ ನದಿ ನಿರ್ವಹಣೆ ಮತ್ತು ಹೂಳೆತ್ತುವ ಕಾಮಗಾರಿ ನಡೆಸಲಾಗಿತ್ತು. ಕಾಮಗಾರಿಗೆ ಕೆಲವರು ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಪೂರ್ಣಗೊಂಡಿಲ್ಲ. ಈ ಅನುದಾನದ ಜೊತೆಗೆ ಇನ್ನೂ ಹೆಚ್ಚಿನ ಅನುದಾನ ಕಲ್ಪಿಸಿ ಕಾಮಗಾರಿ ಮುಂದುವರೆಸುವುದಾಗಿ ತಿಳಿಸಿದರು.
ಕೊಡಗು ಜಿಲ್ಲೆಗೆ ಕಲ್ಪಿಸಿರುವ ವಿಶೇಷ ಪ್ಯಾಕೆಜ್‍ನಲ್ಲಿ ನದಿ ನಿರ್ವಹಣೆ ಕಾಮಗಾರಿಗೂ ಅನುದಾನ ಕಲ್ಪಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು.
ನದಿ ದಂಡೆಗಳ ಬಡಾವಣೆಗಳ ಜನರ ಸಮಸ್ಯೆಗೆ ಸರಕಾರ ಸ್ಪಂದಿಸುವುದಾಗಿ ಹೇಳಿದ ಸೋಮಣ್ಣ ಅವರು ಮಳೆಗಾಲ ನಂತರ ಕೂಡಲೆ ನದಿ ನಿರ್ವಹಣೆ ಕಾಮಗಾರಿ ಪುನರಾರಂಭಗೊಳ್ಳಲಿದೆ. ಸಂತ್ರಸ್ಥರಿಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿಕೊಡಲು ಸ್ಥಳೀಯ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು, ಜನಪ್ರತಿನಿಧಿಗಳು ಕೈಗೊಳ್ಳುವ ಯೋಜನೆಗಳಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಯಾವುದೇ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯುಂಟು ಮಾಡುವ ಮನೋಭಾವನೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ತೊಡಕು ಉಂಟುಮಾಡುವ ಮನಸ್ಥಿತಿ ಕೈಬಿಡಬೇಕೆಂದು ಕರೆ ನೀಡಿದರು.
ಸಚಿವರೊಂದಿಗೆ ಭೇಟಿ ನೀಡಿದ ಮೈಸೂರು-ಮಡಿಕೇರಿ ಲೋಕಸಭಾ ಸದಸ್ಯ ಪ್ರತಾಪ್‍ಸಿಂಹ ಮಾತನಾಡಿ, ಅಭಿವೃದ್ದಿ ಕಾಮಗಾರಿಗೆ ಯಾರೇ ವಿರೋಧ ಪಡಿಸಿದರೂ ನದಿ ನಿರ್ವಹಣೆ ಕಾಮಗಾರಿ ಮುಂದುವರೆಯುತ್ತದೆ. ನದಿಯಲ್ಲಿ ಹೂಳೆತ್ತುವ ವಿಚಾರದಲ್ಲಿ ವಿವಾದ ಮಾಡುತ್ತಿರುವ ಕಾಂಗ್ರೆಸ್‍ನ ಕೆಲ ಮಂದಿ ವಿರುದ್ಧ ಪ್ರತಾಪ್‍ಸಿಂಹ ಆಕ್ರೋಷ ವ್ಯಕ್ತಪಡಿಸಿದರು.
ಜನರಿಗೆ ಸಮಸ್ಯೆಯಾಗಬಾರದೆಂದು ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಮಳೆ ನಿಂತ ಕೂಡಲೆ ಮತ್ತೆ ನದಿಯಲ್ಲಿ ಹೂಳೆತ್ತುವ ಕಾರ್ಯ ಪುನರಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸಚಿವರೊಂದಿಗೆ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ತಹಶೀಲ್ದಾರ್ ಗೋವಿಂದರಾಜು, ಡಿವೈಎಸ್ಪಿ ಎಚ್.ಎಂ.ಶೈಲೇಂದ್ರ, ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಮತ್ತಿತರರು ಇದ್ದರು.
