ಮಡಿಕೇರಿ ರೇಸ್ ಕೋರ್ಸ್ ರಸ್ತೆಯ ಗುಂಡಿಗಳನ್ನು ಮುಚ್ಚಿದ ಜೆಡಿಎಸ್ ಕಾರ್ಯಕರ್ತರು

15/08/2020

ಮಡಿಕೇರಿ ಆ.15 : ನಗರ ಯುವ ಜೆಡಿಎಸ್ ಕಾರ್ಯಕರ್ತರು ನಗರಸಭೆಯ ನಿರ್ಲಕ್ಷ್ಯದಿಂದ ಸಂಪೂರ್ಣವಾಗಿ ಹದಗೆಟ್ಟಿರುವ ರೇಸ್ ಕೋರ್ಸ್ ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ಶ್ರಮದಾನ ನಡೆಸಿ ವಿಶಿಷ್ಟ ರೀತಿಯಲ್ಲಿ 74 ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ನೇತೃತ್ವದಲ್ಲಿ ಹೊಂಡ ಗುಂಡಿಗಳನ್ನು ಮುಚ್ಚಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರಸಭೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸಮಿತಿ ಕಾರ್ಯದರ್ಶಿ ಸುನಿಲ್, ಸಂಘಟನಾ ಕಾರ್ಯದರ್ಶಿ ಬೊಳ್ಳಿಯಂಡ ಗಣೇಶ್, ಯುವ ಜೆಡಿಎಸ್ ನ ಜಿಲ್ಲಾ ವಕ್ತಾರ ರವಿ ಕಿರಣ್, ಯುವ ಜೆಡಿಎಸ್ ನಗರಾಧ್ಯಕ್ಷ ಮೋನಿಷ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ನಗರ ಮಹಿಳಾ ಘಟಕದ ಅಧ್ಯಕ್ಷರಾದ ಸುನಂದಾ, ತಾಲ್ಲೂಕು ಸಾಮಾಜಿಕ ಜಾಲತಾಣದ ಸಂಚಾಲಕ ಅಜಿತ್, ಪ್ರಮುಖರಾದ ಕೋಳಿಮಾಡ ಗಣೇಶ್, ಸುಕೇಶ್ ಚಂಗಪ್ಪ, ಉಮೇಶ್, ಹೆಚ್.ಎ ರವಿಕುಮಾರ್, ಪ್ರಮೋದ್, ಪ್ರವೀಣ್ ಕುಮಾರ್, ಮುಜೀಬ್, ರಫೀಕ್, ಕೆ.ರಾಜು ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ಕೆ.ಎಂ.ಗಣೇಶ್ ನಗರದ ರಸ್ತೆಗಳ ವ್ಯವಸ್ಥೆ ಮತ್ತು ನಗರಸಭೆಯ ನಿರ್ಲಕ್ಷ್ಯದ ವಿರುದ್ಧ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.