ಸರ್ಕಾರದ ವಿರುದ್ಧ ಸಿದ್ದು ವಾಗ್ಧಾಳಿ
20/08/2020

ಬೆಂಗಳೂರು ಆ.20: ಡಿ.ಜೆ.ಹಳ್ಳಿ-ಕೆ.ಜೆ.ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಆಡಳಿತ ಪಕ್ಷವೇ ಸತ್ಯಶೋಧನಾ ತಂಡ ರಚಿಸಿ ಸತ್ಯ ಹುಡುಕುತ್ತೇವೆ ಎಂದು ಹೊರಟಿರುವುದು ಭೀಕರ ಅಪಹಾಸ್ಯವಾಗಿದ್ದು, ಸರ್ಕಾರದ ಈ ನಿರ್ಧಾರ ತನಿಖೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿರುವ ಸಿದ್ದರಾಮಯ್ಯ, ಗಲಭೆಗೆ ಸರ್ಕಾರ ಹಾಗೂ ಗೃಹ ಇಲಾಖೆ ವೈಫಲ್ಯವೇ ಕಾರಣ. ಸರ್ಕಾರ ಘಟನೆಯ ವೈಫಲ್ಯದ ನೈತಿಕ ಜವಾಬ್ದಾರಿ ಹೊರಬೇಕು ಎಂದಿದ್ದಾರೆ.
ಸರ್ಕಾರ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು ಬಿಟ್ಟು. ಪ್ರತಿಪಕ್ಷ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ. ಆಡಳಿತ ಶಕ್ತಿ ಕೇಂದ್ರದ ದೂರದಲ್ಲಿನ ಸ್ಥಳದಲ್ಲಿ ಇಂತಹ ಘಟನೆ ನಡೆದಿದ್ದು, ಅನಾಹುತವನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಸರ್ಕಾರ ಇದ್ದು ಸತ್ತಂತೆ ಎಂದಿದ್ದಾರೆ.
