ಅರಸು ಜನ್ಮ ದಿನಾಚರಣೆ : ದೇವರಾಜ ಅರಸು ಶೋಷಿತರ ಶಕ್ತಿಯಾಗಿದ್ದರು : ಟಿ.ಪಿ.ರಮೇಶ್ ಅಭಿಪ್ರಾಯ

ಮಡಿಕೇರಿ ಆ. 20 : ತಮ್ಮ ದೂರದೃಷ್ಟಿತ್ವದ ಕಾರ್ಯಕ್ರಮಗಳಿಂದ ಶೋಷಿತ ವರ್ಗದ ಜನರಿಗೆ ನೈತಿಕ ಬಲವನ್ನು ತುಂಬುವಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಯಶಸ್ವಿಯಾಗಿದ್ದರು ಎಂದು ಕೊಡಗು ಜಿಲ್ಲಾ ಅಹಿಂದ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಸಹಮತ ವೇದಿಕೆ ಮತ್ತು ಅಹಿಂದ ಒಕ್ಕೂಟದ ಜಂಟಿ ಆಶ್ರಯದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 105ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಡಳಿತದಲ್ಲಿ ದಕ್ಷತೆ ಮತ್ತು ಮಾನವೀಯತೆಯನ್ನು ಮೈಗೂಡಿಸಿಕೊಂಡಿದ್ದ ಅರಸು ಅವರು ಶೋಷಿತರ ಶಕ್ತಿಯಾಗಿದ್ದರು. ಸಾಮಾಜಿಕ ಬದಲಾವಣೆ, ಬಡತನ ನಿರ್ಮೂಲನೆ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸೇವೆಯನ್ನು ಮುಡಿಪಾಗಿಟ್ಟಿದ್ದರು ಎಂದು ರಮೇಶ್ ಶ್ಲಾಘಿಸಿದರು.
ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಡವರ ಏಳಿಗೆಗಾಗಿ ಸಾಮಾಜಿಕ ಕ್ರಾಂತಿಯ ಯೋಜನೆಗಳನ್ನು ಜಾರಿಗೆ ತಂದಿದ್ದರು. ಭೂಸುಧಾರಣಾ ಕಾಯಿದೆ ಜಾರಿಗೆ ತರುವ ಮೂಲಕ ಭೂಮಾಲೀಕರು ಹಾಗೂ ಭೂಹೀನರ ನಡುವಿನ ಕಂದಕವನ್ನು ತೊಡೆದು ಹಾಕುವ ಪ್ರಯತ್ನ ಮಾಡಿದರು ಎಂದರು. ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅರಸು ಅವರ ಆದರ್ಶಗಳನ್ನು ಇಂದಿನ ರಾಜಕಾರಣಿಗಳು ಪಾಲಿಸಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಅತಿಥಿಗಳು ದೇವರಾಜು ಅರಸು ಅವರ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಎಂ.ಮುದ್ದಯ್ಯ, ಸಹಮತ ವೇದಿಕೆಯ ಉಪಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು, ಪ್ರಮುಖರಾದ ಮುನೀರ್ ಅಹಮ್ಮದ್, ಮುತ್ತಪ್ಪ, ದಿನೇಶ್, ದೇವಾಂಗ ಸಮಾಜದ ಟಿ.ಕೆ.ಪಾಂಡುರಂಗ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮೋಹನ್, ಬಿಲ್ಲವ ಸಮಾಜದ ಪ್ರಮುಖರಾದ ಅಪ್ರುರವೀಂದ್ರ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಮೂಡ ಮಾಜಿ ಅಧ್ಯಕ್ಷ ಚುಮ್ಮಿದೇವಯ್ಯ, ಕಾಂಗ್ರೆಸ್ ಪದಾಧಿಕಾರಿಗಳಾದ ಉಸ್ಮಾನ್, ಟಿ.ಕೆ.ಸಾಯಿಕುಮಾರ್, ಸ.ರಾ.ಚಂಗಪ್ಪ, ಆರ್.ಪಿ.ಚಂದ್ರಶೇಖರ್, ಚೇಂಬರ್ ಆಫ್ ಕಾಮರ್ಸ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ, ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಮತ್ತಿತರರು ಹಾಜರಿದ್ದರು.