ಕುಪ್ಪಿಗಿಡದ ಔಷಧೀಯ ಗುಣಗಳು

25/08/2020

ಕುಪ್ಪಿಗಿಡ ಉಷ್ಣವಲಯದ ಆಫ್ರಿಕ, ದಕ್ಷಿಣ ಆಫ್ರಿಕ,ಭಾರತ,ಶ್ರೀಲಂಕಾ,ಪಾಕಿಸ್ತಾನ ಮುಂತಾದೆಡೆ ಸಾಮಾನ್ಯವಾಗಿ ಕಂಡು ಬರುವ ಒಂದು ಸಸ್ಯ.

ಔಷಧೀಯ ಗುಣಗಳು

Acalypha indica from pondichery botanical garden ಕುಪ್ಪಿಗಿಡಕ್ಕೆ ಔಷಧೀಯ ಮಹತ್ವವಿದೆ. ಇದರ ಎಲೆ, ಎಳೆಯ ಕುಡಿಗಳು, ಬೇರು ಮತ್ತು ಹೂವುಗಳನ್ನು ಕಷಾಯ, ಪುಡಿ, ಹೊಸರಸ ಇವುಗಳ ರೂಪದಲ್ಲಿ ಜಂತುಹುಳುನಾಶಕವಾಗಿ, ಅಸ್ತಮ ಕೆಮ್ಮು ಮುಂತಾದ ಶ್ವಾಸಕೋಶಸಂಬಂಧಿ ರೋಗಗಳ ನಿವಾರಕವಾಗಿ, ವಿರೇಚಕವಾಗಿ, ಮನಶ್ಯಾಂತಿಕಾರಕವಾಗಿ, ವಾಂತಿಕಾರಕವಾಗಿ, ಸುಪ್ತ್ಯಾವಾಹಕವಾಗಿ ಬಳಸುತ್ತಾರೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.

ಸರಳ ಚಿಕಿತ್ಸೆಗಳು :
ದೇಹ ಕಾಂತಿಗೆ : ಶುದ್ಧವಾದ ಎಳ್ಳೆಣ್ಣೆಯಲ್ಲಿ ಒಂದು ಹಿಡಿ ಕುಪ್ಪಿ ಎಲೆಗಳನ್ನು ಹಾಕಿ ಕಾಯಿಸಿ ಶೋಧಿಸಿಟ್ಟುಕೊಳ್ಳುವುದು. ತಣ್ಣಗಾದ ಮೇಲೆ ತೈಲವನ್ನು ಹಚ್ಚಿ ಸ್ನಾನ ಮಾಡುವುದು.

ವಾತನೋವು ಸೆಳೆತಕ್ಕೆ: ಹಸೀ ಕುಪ್ಪಿ ಎಲೆಗಳನ್ನು ಜಜ್ಜಿ, ಎಳ್ಳೆಣ್ಣೆಯಲ್ಲಿ ಬೆರೆಸಿ, ತೈಲ ಉಳಿಯುವಂತೆ ಕಾಯಿಸಿ, ಶೋಧಿಸಿಟ್ಟುಕೊಳ್ಳುವುದು. ಬೇಕಾದರೆ ಸುಗಂಧ ವಸ್ತುಗಳ ಚೂರ್ಣವನ್ನು ಸೇರಿಸಿಕೊಳ್ಳಬಹುದು. ನೋವಿರುವ ಕಡೆಗೆ ಹಚ್ಚುವುದು.

ಮಲಬದ್ಧತೆಗೆ : ಮಕ್ಕಳು ಮಲಬದ್ಧತೆಯಾಗಿ ಅಳುತ್ತಿದ್ದರೆ ಹಸೀ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ಜಜ್ಜಿ ಸ್ವಲ್ಪ ಭಾಗವನ್ನು ಮಲದ್ವಾರದಲ್ಲಿ ಸೇರಿಸುವುದು.

ಮಕ್ಕಳ ಶೀತ ವ್ಯಾಧಿಗೆ : ಹಸೀ ಎಲೆಗಳ ರಸವನ್ನು ಸ್ವಲ್ಪ ಜೇನು ಸೇರಿಸಿ ನೆಕ್ಕುವುದು. ಮೊದಲು ಸ್ವಲ್ಪ ವಾಂತಿಯಾಗಿ, ನಂತರ ವಾಸಿಯಾಗುವುದು. ಈ ರಸ ಸೇವಿಸುವುದರಿಂದ ದೊಡ್ಡವರಲ್ಲಿ ಕೆಮ್ಮು, ಕಫ, ದಮ್ಮು ಗುಣವಾಗುವುದು.

ಮಕ್ಕಳ ಹೊಟ್ಟೆನೋವಿಗೆ: ಬೆಳ್ಳುಳ್ಳಿ ಮೆಣಸು ಇವುಗಳ ಸಮತೂಕದ ಎರಡು ಭಾಗ ಕುಪ್ಪಿ ಸೊಪ್ಪನ್ನು ಸೇರಿಸಿ, ನುಣ್ಣಗೆ ಅರೆದು, ಸ್ವಲ್ಪ ಭಾಗವನ್ನು ಹಾಲಿನಲ್ಲಿ ಕದಡಿ ಕುಡಿಸುವುದು.

ಪೀನಾಸಿ ರೋಗಕ್ಕೆ(ಮೂಗಿಗೆ ವಾಸನೆ ತಿಳಿಯದಿರುವುದು) : ಒಂದು ಬೆಳ್ಳುಳ್ಳಿ ಹಿಲಕು, ಒಂದು ಮೆಣಸಿನಕಾಳು ಮತ್ತು ನಾಲ್ಕೈದು ಕುಪ್ಪಿ ಎಲೆಗಳನ್ನು ಸೇರಿಸಿ, ನುಣ್ಣಗೆ ಅರೆದು ಬಟ್ಟೆಯಲ್ಲಿ ಶೋಧಿಸಿ ಮೂಗಿನ ಎರಡೂ ಹೊಳ್ಳೆಗಳಿಗೆ ನಾಲ್ಕೈದು ತೊಟ್ಟು ಬಿಡುವುದು.

ತುರಿಕೆ, ಕಜ್ಜಿಗೆ : ಹಸೀ ಎಲೆಗಳನ್ನು ತಂದು, ಸ್ವಲ್ಪ ಅಡಿಗೆ ಉಪ್ಪು ಸೇರಿಸಿ ನುಣ್ಣಗೆ ಕಲ್ಪತ್ತಿನಲ್ಲಿ ಅರೆದು ಪಟ್ಟು ಹಾಕುವುದು. ಸಿಪಲಿಸ್ ಎನ್ನುವ ಮರ್ಮಾಂಗ ಹುಣ್ಣಿಗೆ ಸಹ ಇದೇ ರೀತಿ ಚಿಕಿತ್ಸೆ ಮಾಡುವುದು.

ಮೂರ್ಛೆಗೆ : ಹಸೀ ಕುಪ್ಪಿ ಎಲೆಗಳ ರಸವನ್ನು ಮೂಗಿನ ಎರಡೂ ಹೊಳ್ಳೆಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು.ಬಹು ಬೇಗ ಪ್ರಜ್ಞೆ ಬಂದು ಎಚ್ಚರವಾಗುವುದು. ಒಂದೆರಡು ಬಾರಿ ತಣ್ಣೀರನ್ನು ಮುಖಕ್ಕೆ ತುಂತುರು ರೂಪದಂತೆ ಚಿಮುಕಿಸುವುದು. ಕಿವಿ ನೋವಿನಲ್ಲಿ ಎಲೆಗಳ ರಸವನ್ನು ನೋವಿರುವ ಕಿವಿಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು. ಸ್ವಲ್ಪ ಬಿಸಿ ಮಾಡಿ ಹಾಕುವುದು.

ವೈಜ್ಞಾನಿಕ ವರ್ಗೀಕರಣ:

ಯೂಪೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಪುಟ್ಟ ಏಕವಾರ್ಷಿಕ ಸಸ್ಯ. ಅಕ್ಯಾಲಿಫ ಇಂಡಿಕ ಎಂಬುದು ಇದರ ವೈಜ್ಞಾನಿಕ ನಾಮ. ಕನ್ನಡದಲ್ಲಿ ತುಪ್ಪಕೀರೆ ಎಂಬ ಹೆಸರೂ ಇದೆ. ಹರೀತ ಮಂಜಿರಿ, ಕುಷ್ಡಿ, ಖೋಕಲಿ, ಹರಿತ ಮಂಜರಿ, ಖೋಖಲಿ,ವಂಚಿಕಾಠೋ, ಕುಪ್ಪಿದೆಟ್ಟು, ಕುಪ್ಪಿವೇಣಿ