35ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ

August 25, 2020

ಮಡಿಕೇರಿ ಆ.25 : ಹದಿನೆಂಟು ವರ್ಷ ವಯಸ್ಸಿನ ಮೇಲ್ಪಟ್ಟವರು ನೋಂದಣಿ ಪತ್ರವನ್ನು ತುಂಬುವ ಮೂಲಕ ನೇತ್ರದಾನಿಗಳಾಗಲು ನೋಂದಣಿ ಮಾಡಿಸಬಹುದು ಎಂದು ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮಾಧಿಕಾರಿ ಡಾ.ಆನಂದ್ ಅವರು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದಡಿ 35 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ-2020 ಸಂಬಂಧಿಸಿದಂತೆ ಅವರು ಮಾಹಿತಿ ನೀಡಿದ್ದಾರೆ.
ನೇತ್ರದಾನಕ್ಕೆ ಗರಿಷ್ಠ ವಯಸ್ಸಿನ ಮಿತಿ ಇರುವುದಿಲ್ಲ. ನೇತ್ರದಾನ ಮಾಡಲು ಲಿಂಗ, ಶರೀರದ ಖಾಯಿಲೆಗಳಾದ ಸಕ್ಕರೆ, ರಕ್ತದ ಒತ್ತಡ ಮತ್ತು ಕಣ್ಣಿನ ರೋಗಗಳಾದ ದೃಷ್ಟಿದೋಷ, ಪೊರೆ, ಅಕ್ಷಿಪಟಲ ಕೀಳುವಿಕೆ, ಯಾವುದೇ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿರುವಿಕೆ ಇವುಗಳ ಅಡ್ಡಿಯಲ್ಲದೆ ಕಣ್ಣಿನ ಪಾರದರ್ಶಕ ಪಟಲ ಆರೋಗ್ಯವಾಗಿದ್ದಲ್ಲಿ ನೇತ್ರದಾನ ಮಾಡಬಹುದು ಎಂದು ಅವರು ಹೇಳಿದ್ದಾರೆ.

  ಮರಣ ಹೊಂದಿದವರು ನೇತ್ರದಾನಕ್ಕೆ ನೋಂದಣಿ ಮಾಡಿಸದಿದ್ದಲ್ಲಿ ಅವರ ಬಂಧುಗಳು ಮರಣ ಹೊಂದಿದವರ ನೇತ್ರದಾನಕ್ಕೆ ಸಮ್ಮತಿ ನೀಡಬಹುದು. ಮರಣ ಹೊಂದಿದವರ ನೇತ್ರದಾನ ಮಾಡಲು ಹತ್ತಿರದ “ನೇತ್ರ ಭಂಡಾರ”/ ನೇತ್ರ ತಜ್ಞರನ್ನು ಯಾವುದೇ ಸಮಯದಲ್ಲಾದರೂ ಸಂಪರ್ಕಿಸಬಹುದು. ಮರಣ ಹೊಂದಿದ 6 ಗಂಟೆಗಳಲ್ಲಿ ನೇತ್ರದಾನ ಮಾಡಬೇಕು. ಅಲ್ಲಿಯವರೆಗೂ ಮರಣ ಹೊಂದಿದವರ ರೆಪ್ಪೆಗಳನ್ನು ಮುಚ್ಚಿರಬೇಕು ಎಂದರು.  
  ನೇತ್ರ ತೆಗೆಯಲು 15-20 ನಿಮಿಷಗಳು ಸಾಕು. ಇದನ್ನು ಮರಣ ಹೊಂದಿದವರು ಇದ್ದ ಜಾಗದಲ್ಲೇ ದಿನದ ಯಾವುದೇ ಸಮಯದಲ್ಲಾದರೂ ಮಾಡಲಾಗುವುದು. ಮತ್ತು ಇದರಿಂದ ಮುಖ ವಿಕಾರವಾಗುವುದಿಲ್ಲ ಹಾಗೂ ಇದಕ್ಕೆ ದಾನಿಗಳ ಬಂಧುಗಳು ಯಾವ ಖರ್ಚನ್ನು ಭರಿಸಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ. 
  ದೇಶದಲ್ಲಿ ಅಂದಾಜು 15 ಲಕ್ಷ ಮಂದಿ ಕಣ್ಣಿನ ಪಾರದರ್ಶಕ ಪಟಲದ ತೊಂದರೆಯಿಂದ ಉಂಟಾದ ಕುರುಡುತನದಿಂದ ನರಳುತ್ತಿದ್ದಾರೆ. ಇದನ್ನು ಪಾರದರ್ಶಕ ಪಟಲದ ಕಸಿ ಮಾಡುವುದರ ಮೂಲಕ ಗುಣ ಪಡಿಸಬಹುದು. ಯಾವುದೇ ನೇತ್ರ ಭಂಡಾರದಲ್ಲಿ ನೋಂದಣಿ ಮಾಡಿಸಿದ್ದರೂ ಮರಣ ಹೊಂದಿದ ಸ್ಥಳಕ್ಕೆ ಹತ್ತಿರದಲ್ಲಿರುವ ನೇತ್ರಭಂಡಾರಕ್ಕೆ ನೇತ್ರಗಳನ್ನು ನೀಡಬಹುದು. ನೇತ್ರ ಭಂಡಾರಗಳ ಬಗ್ಗೆ ಹೆಚ್ಚಿನ ಮಾಹಿತಿಗೆ 104 ಸಹಾಯವಾಣಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ದಾನ ಮಾಡಿದ ಕಣ್ಣುಗಳನ್ನು ಮರಣದ ನಂತರವೇ ತೆಗೆಯಬೇಕು. ಜೀವಂತ ವ್ಯಕ್ತಿಯ ಕಣ್ಣುಗಳನ್ನು ದಾನಕ್ಕಾಗಿ ತೆಗೆಯಬಾರದು. ಯಾವುದೇ ಕೃತಕ ಅಥವಾ ಪ್ರಾಣಿಯ ಕಣ್ಣು ಮನುಷ್ಯನ ಕಣ್ಣಿಗೆ ಬದಲಾಗಿ ಉಪಯೋಗಿಸುವುದಿಲ್ಲ. ಅಂತರಾಷ್ಟ್ರೀಯ ನಿಯಮಗಳನುಸಾರ ದಾನಿಗಳ ಹಾಗೂ ದಾನ ಪಡೆದವರ ಹೆಸರುಗಳನ್ನು ನೇತ್ರ ಭಂಡಾರದಲ್ಲಿ ಗೌಪ್ಯವಾಗಿರಿಸಲಾಗುವುದು ಎಂದು ಡಾ.ಆನಂದ್ ಅವರು ತಿಳಿಸಿದ್ದಾರೆ. 
  ನೇತ್ರದಾನಕ್ಕೆ ನೋಂದಣಿ ಮಾಡಿಸುವ ಮೊದಲು, ವಿಷಯದ ಬಗ್ಗೆ ನಿಮ್ಮ ಕುಟುಂಬದವರ ಸ್ನೇಹಿತರ ವಕೀಲರ ಹಾಗೂ ವೈದ್ಯರೊಡನೆ ಚರ್ಚಿಸುವುದು ಸೂಕ್ತ. ಏಕೆಂದರೆ ನಿಮ್ಮ ನೇತ್ರದಾನ ನಿಮ್ಮ ಮನೆಯವರ ಅರಿವಿಲ್ಲದೇ ಅಥವಾ ಅವರ ಮರೆವಿನಿಂದ ಸಾಧ್ಯವಾಗದೇ ಇರಬಹುದು.
  ಸ್ನೇಹಿತರನ್ನು ಹಾಗೂ ಬಂಧುಗಳನ್ನು ನೇತ್ರದಾನಕ್ಕೆ ಪ್ರೇರೇಪಿಸಿ ಯಾವುದೇ ವ್ಯಕ್ತಿಯ ಸಾವಿನ ಸಂದರ್ಭದಲ್ಲಿ  ನೇತ್ರದಾನಕ್ಕೆ ಅವಕಾಶವಿದೆಯೇ ಎಂದು ವಿಚಾರಿಸಿ ಇದರ ಬಗ್ಗೆ ಹತ್ತಿರದ ನೇತ್ರ ಭಂಡಾರವನ್ನು ಸಂಪರ್ಕಿಸಬಹುದಾಗಿದೆ. ನೇತ್ರದಾನದ ನೋಂದಣಿ ಚೀಟಿಯನ್ನು ವೈದ್ಯರಿಂದ ಪೂರ್ಣಗೊಳಿಸಿ ಯಾವಾಗಲೂ ಕಿಸೆಯಲ್ಲೇ ಇಡಿ. ವಿಳಾಸ ಬದಲಾದಲ್ಲಿ ಅದನ್ನು ನೇತ್ರ ಭಂಡಾರಕ್ಕೆ ತಿಳಿಸಿ, ನೋಂದಣಿ ಸಂಖ್ಯೆಯನ್ನು ಪತ್ರದಲ್ಲಿ ನಮೂದಿಸುವುದನ್ನು ಮರೆಯಬೇಡಿ ಎಂದು ಡಾ.ಆನಂದ್ ಅವರು ಸಲಹೆ ಮಾಡಿದ್ದಾರೆ. 
  “ನೇತ್ರಗಳು ದೇವರ ವರದಾನ, ಇದರ ದಾನದಿಂದ ಆ ದೇವರಿಗೆ ನಮನ ಸಲ್ಲಿಸೋಣ” ಒಬ್ಬ ವ್ಯಕ್ತಿಯು ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ನೀಡುತ್ತದೆ. ನೇತ್ರದಾನ ಸರ್ವಕಾಲಕ್ಕೂ ಶ್ರೇಷ್ಠ ದಾನ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದ್ದಾರೆ. 
ಹೆಚ್ಚಿನ ಮಾಹಿತಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಮಡಿಕೇರಿ ಕೊಡಗು ಜಿಲ್ಲೆ ದೂ.ಸಂ: 08272-220332, 223444 ನ್ನು ಸಂಪರ್ಕಿಸಬಹುದಾಗಿದೆ.    

error: Content is protected !!