ಮರ ಮತ್ತು ಬೆಳೆ ನಷ್ಟ ಸಮೀಕ್ಷೆ ಮಾಹಿತಿ ನೀಡಲು ಸೆ.10 ಕೊನೆ ದಿನ

27/08/2020

ಮಡಿಕೇರಿ ಆ.27 : ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಗೆ ಮಾಲೀಕರ ತೋಟದಲ್ಲಿ ಬಿದ್ದು ಹೋಗಿರುವ ಮರ ಸಂಬಂಧ ಜಿಲ್ಲೆಯ ವಲಯ ಅರಣ್ಯ ಕಚೇರಿ, ಗ್ರಾಮ ಪಂಚಾಯಿತಿ, ನಾಡ ಕಚೇರಿಗಳಲ್ಲಿ ಅರ್ಜಿ ನಮೂನೆ ಪಡೆದು ಸೆಷ್ಟೆಂಬರ್ 10 ರೊಳಗೆ ‘ವಲಯ ಅರಣ್ಯ ಕಚೇರಿ’ಗೆ ಸಲ್ಲಿಸುವ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ, ಪಂಚಾಯತ್ ರಾಜ್, ಅರಣ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಬುಧವಾರ ನಡೆದ ಸಭೆಯಲ್ಲಿ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಯಿತು.
ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಯಿಂದಾಗಿ ಸ್ವಂತ ತೋಟಗಳಲ್ಲಿ ಮರಗಳು ಬಿದ್ದು ಹೋಗಿದ್ದು, ‘ಬೆಳೆ ಸಮೀಕ್ಷೆ ಮಾದರಿ’ಯಲ್ಲಿ ಬಿದ್ದು ಹೋಗಿರುವ ಮರಗಳ ಸಮೀಕ್ಷೆ ಕೈಗೊಳ್ಳಬೇಕು. ಈ ಸಂಬಂಧ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದರು.
ಪ್ರಕೃತಿ ವಿಕೋಪದಿಂದಾಗಿ ಸೇತುವೆ, ನದಿ ದಡದಲ್ಲಿ ಬಿದ್ದಿರುವ ಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಸಿಲ್ವರ್ ಓಕ್ ಮರಕ್ಕೆ ಯಾವುದೇ ರೀತಿಯ ಅನುಮತಿ ಇಲ್ಲ. ಉಳಿದಂತೆ 50 ಸಾವಿರ ರೂ. ಒಳಗೆ ಬೆಲೆ ಬಾಳುವ ಮರ ಸಂಬಂಧ ಉಪ ವಿಭಾಗಾಧಿಕಾರಿ ಅವರು ಅನುಮತಿ ನೀಡಲಿದ್ದಾರೆ. ಹಾಗೆಯೇ 50 ಸಾವಿರ ರೂ. ಮೇಲ್ಪಟ್ಟು ಬೆಲೆ ಬಾಳುವ ಮರಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರು ಅನುಮತಿ ನೀಡಲಿದ್ದಾರೆ ಎಂದು ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ಮಾತನಾಡಿ, ಭಾರೀ ಮಳೆ ಮತ್ತು ಗಾಳಿಯಿಂದಾಗಿ ಸ್ವಂತ ಜಮೀನಿನಲ್ಲಿ ಬಿದ್ದಿರುವ ಮರಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ವಹಿಸಲಾಗುವುದು. ಇದಕ್ಕೆ ಎಲ್ಲರೂ ಸಹಕರಿಸುವಂತೆ ಅವರು ಕೋರಿದರು.
ಪ್ರಕೃತಿ ವಿಕೋಪದಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಕಾರ್ಯವು ಈಗಾಗಲೇ ಆರಂಭವಾಗಿದ್ದು, ಸೆಪ್ಟೆಂಬರ್ 10 ರೊಳಗೆ ನಾಡ ಕಚೇರಿಗೆ ಬೆಳೆ ಸಮೀಕ್ಷೆ ಮಾಹಿತಿಯ ಅರ್ಜಿಯನ್ನು ಸಲ್ಲಿಸಬೇಕು. ಕೃಷಿ, ತೋಟಗಾರಿಕೆ, ಕಾಫಿ, ಕರಿಮೆಣಸು ಮತ್ತಿತರ ಬೆಳೆ ನಷ್ಟದ ಮಾಹಿತಿ ಒದಗಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
‘ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಭೂಕುಸಿತ, ಬೆಳೆ ಹಾನಿ, ರಸ್ತೆ ಮತ್ತು ಸೇತುವೆ ಹಾನಿ ಪ್ರದೇಶಗಳಿಗೆ ಕೇಂದ್ರ ತಂಡವು ಸದ್ಯದಲ್ಲಿಯೇ ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.’
ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ ಸಾಕಷ್ಟು ನಷ್ಟ ಉಂಟಾಗಿದ್ದು, ಈ ಪ್ರದೇಶಗಳ ವೀಕ್ಷಣೆ ಮಾಡಿ ಅಗತ್ಯ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.
ಭೂ ಪರಿವರ್ತನೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಸಂಬಂಧ ದೂರುಗಳು ಕೇಳಿ ಬರುತ್ತಿದ್ದು, ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಭೂ ಪರಿವರ್ತನೆಗೆ ಬಾಕಿ ಇರುವ ಅರ್ಜಿಗಳ ವಿಲೇವಾರಿ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ತಾ.ಪಂ.ಇಒಗಳಾದ ಲಕ್ಷ್ಮೀ, ಸುನೀಲ್ ಕುಮಾರ್, ತಹಶೀಲ್ದಾರರಾದ ಮಹೇಶ್, ಗೋವಿಂದ ರಾಜು, ನಂದೀಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನ ಎಂ.ಷೇಕ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ್, ಕಾಫಿ ಮಂಡಳಿ ಉಪ ನಿರ್ದೇಶಕರಾದ ಶಿವಕುಮಾರ ಸ್ವಾಮಿ, ಹಿರಿಯ ಭೂ ವಿಜ್ಞಾನಿ ರೇಷ್ಮ, ಅರಣ್ಯ, ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಇತರರು ಹಾಜರಿದ್ದರು.