ಶಾಂತಿ-ನೆಲೆಯ ಪ್ರತೀಕ ವೀರಭದ್ರೇಶ್ವರ : ಮಹಾಂತ ಶಿವಲಿಂಗ ಸ್ವಾಮೀಜಿ

27/08/2020

ಮಡಿಕೇರಿ ಆ. 27 : ಶಾಂತಿ ಮತ್ತು ನೆಲೆಯ ಪ್ರತೀಕವೆ ವೀರಭದ್ರೇಶ್ವರ ಸ್ವಾಮಿ ಎಂದು ಮನೆಹಳ್ಳಿ ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ತಿಳಿಸಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಜಂಗಮ ಅರ್ಚಕರ ಸಂಘ, ವೀರಶ್ಯೆವ ಲಿಂಗಾಯತ ಸಂಘಟನಾ ವೇದಿಕೆ, ನೇಗಳ್ಳೆ ವೀರಭದ್ರೇಶ್ವರ ದೇವಾಲಯ ಸಮಿತಿ ಸಂಯುಕ್ತ ಆಶ್ರಯದಲ್ಲಿ ನೇಗಳೆ ಗ್ರಾಮದ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದಲ್ಲಿ ಆಶಿರ್ವಚನ ನೀಡಿದರು.
ದುಷ್ಟ ಶಕ್ತಿಗಳ ನಾಶ ಮಾಡಿ ಶಾಂತಿ ನೆಲೆಸಲು ಅವತರಿಸಿದವನೆ ವೀರಭದ್ರೇಶ್ವರ. ವೀರ ಎಂದರೆ ಶಾಂತಿ ಭದ್ರ ಎಂದರೆ ನೆಲೆ ಎಂದು ವಿಶ್ಲೇಷಿಸಿದ ಅವರು ನಾವು ಎಷ್ಟೇ ಮುಂದುವರೆದರೂ ಅಭಿವೃದ್ಧಿ ಸಾಧಿಸಿದರೂ ಸಹ ಆಧ್ಯಾತ್ಮಿಕತೆ ದೈವ ಶಕ್ತಿ ಎನ್ನುವುದು ಬೇಕೆ ಬೇಕು ಎಂದರು. ಕೊರೋನಾ ನಿರ್ಮೂಲನೆ ಆಗಬೇಕು ಕಳೆದ 3 ವರ್ಷಗಳಿಂದ ಪ್ರಕೃತಿ ವಿಕೋಪದಿಂದಾಗಿ ತತ್ತರಿಸಿರುವ ಕೊಡಗಿನ ರಕ್ಷಣೆ ಆಗಬೇಕು, ಸುಭೀಕ್ಷಾ ಕೊಡಗಿನ ನಿರ್ಮಾಣವಾಗಬೇಕೆಂದು ಆಶಿಸಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಧಾರ್ಮಿಕ ಸಮಾರಂಭದ ಸಾನಿದ್ಯ ವಹಿಸಿದರು. ಈ ಸಂಧರ್ಭ ದೇವಾಲಯ ಸಮಿತಿ ಅಧ್ಯಕ್ಷ ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಎಸ್. ಮಹೇಶ್, ಖಜಾಂಜಿ ಡಿ.ಬಿ.ಸೋಮಪ್ಪ, ಕಾರ್ಯದರ್ಶಿ ಜಯರಾಜ್, ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ಮೋಹನ್ ಮೂರ್ತಿ, ಕಾರ್ಯದರ್ಶಿ ಸೋಮಶೇಖರ್ ಶಾಸ್ತ್ರಿ, ಖಜಾಂಜಿ ಮನುಕುಮಾರ್ ಶಾಸ್ತ್ರಿ, ಅರ್ಚಕ ಸೋಮೇಶ್, ದೇವಾಲಯ ಸಮಿತಿ ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಚಂದನ್ ಹಾಗು ಗ್ರಾಮಸ್ಥರು ಹಾಜರಿದ್ದರು. ವೀರಭದ್ರೇಶ್ವರ ಜಯಯ್ಸೊತ್ಸವರ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.