ಹಿಂದೂ ಆಧ್ಯಾತ್ಮಿಕ ಸೇವಾ ಮೇಳದಿಂದ ಭಾನುವಾರ ಪ್ರಕೃತಿ ವಂದನಾ ಕಾರ್ಯಕ್ರಮ

28/08/2020

ಮಡಿಕೇರಿ ಆ.28 : ಹಿಂದೂ ಆಧ್ಯಾತ್ಮಿಕ ಸೇವಾ ಮೇಳ (ಎಚ್ ಎಸ್ ಎಸ್ ಎಫ್) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಸರ ಸಂರಕ್ಷಣೆ ಗತಿವಿಧಿಯ ಸಹಭಾಗಿತ್ವದಲ್ಲಿ ಪ್ರಕೃತಿ ವಂದನಾ ಎಂಬ ವಿಶಿಷ್ಟ ಕಾರ್ಯಕ್ರಮ ಭಾನುವಾರ ನಡೆಯಲಿದೆ.
ಪ್ರಕೃತಿಯಿಂದಾಗಿ ಸಕಲ ಜೀವರಾಶಿಗಳ ಅಸ್ತಿತ್ವ ಇರುವುದರಿಂದ ಅಂತಹ ಪ್ರಕೃತಿಯನ್ನು ಸ್ಮರಿಸಿ ಅದಕ್ಕೆ ವಂದಿಸುವ ಹಾಗೂ ಪ್ರಕೃತಿಯ ಸಂರಕ್ಷಣೆ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಈ ಅಭಿಯಾನವನ್ನು ರಾಷ್ಟ್ರದಾದ್ಯಂತ ಆಯೋಜಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿಯೂ ನಡೆಯಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಪರಿಸರ ಸಂರಕ್ಷಣೆ ಗತಿವಿಧಿ ಸಹ ಪ್ರಮುಖ್ ಎಂ.ಬಿ.ಅರುಣ್ ಕುಮಾರ್ ತಿಳಿಸಿದ್ದಾರೆ.
ಗಿಡ, ಮರ, ಜಲ, ಭೂಮಿಯ ಸಂರಕ್ಷಣೆಗಾಗಿ ಶ್ರದ್ಧೆ ಮತ್ತು ಸಮ್ಮಾನದ ಸಂವರ್ಧನೆಯ ಪ್ರತೀಕವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪರಿಸರ ಮತ್ತು ಪ್ರಾಣಿಗಳ ರಕ್ಷಣೆಯ ಬಗ್ಗೆ ನಮ್ಮ ಪ್ರಾಚೀನ ಮೌಲ್ಯಗಳನ್ನು ಪುನಃ ನಮ್ಮ ಸಮಾಜಕ್ಕೆ ನೆನಪಿಸಿ ಮತ್ತೆ ಆ ದಿಸೆಯಲ್ಲಿ ಚಿಂತನೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ
ನಮ್ಮ ಮನೆಯಲ್ಲಿರುವ ಗಿಡ , ಪರಿಸರ ಮತ್ತು ವನಗಳ ಬಗ್ಗೆ ನಮಗಿರುವ ಶ್ರದ್ಧೆಯನ್ನು ಸಂಸ್ಕಾರದ ಪ್ರತೀಕವನ್ನಾಗಿ ಮಾಡಿಕೊಳ್ಳುವುದರಿಂದ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದ ಪ್ರಭಾವ ಬೀರುತ್ತದೆ. ಅದರ ಜೊತೆಗೆ ಅದು ನಮ್ಮ ವಿಚಾರ ಮತ್ತು ಆಚರಣೆಯ ಮೇಲೆಯೂ ಪ್ರಭಾವ ಬೀರುತ್ತದೆ. ಹಾಗಾಗಿಯೆ ಪ್ರಕೃತಿ ವಂದನೆಗಾಗಿ ಗಿಡ ಮರ ಭೂಮಿಯನ್ನು ಪ್ರತೀಕವಾಗಿ ಆರಿಸಿದೆ. ಮನುಷ್ಯ ತನ್ನ ದಿನನಿತ್ಯದ ಜೀವನದಲ್ಲಿ ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶದ ರಕ್ಷಣೆ ಈ ವಂದನಾ ಕಾರ್ಯದ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದಾರೆ.
ವಂದನಾ ಕ್ರಮ: ಮೂರು ಬಾರಿ ಓಂಕಾರ, ಬಳಿಕ ವೃಕ್ಷಕ್ಕೆ ತಿಲಕ ಮತ್ತು ಅಕ್ಷತೆ
ಸಂರಕ್ಷಣೆಯ ದ್ಯೋತಕವಾಗಿ ಪವಿತ್ರ ದಾರ ಕಟ್ಟುವುದು, ಜಲ ಪ್ರದಾನ ಮತ್ತು ಪ್ರತಿದಿನ ನೀರುಣಿಸುವ ಸಂಕಲ್ಪ, ಪುಷ್ಪಾರ್ಚನೆ ಮತ್ತು ದೀಪವನ್ನು ಹಚ್ಚಿ ಆರತಿಯನ್ನು ಮಾಡುವುದು.
ಪ್ರಕೃತಿ ವಂದನಾ ಕುರಿತು 10 ಗಂಟೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಮಾತನಾಡಲಿದ್ದು,ಈ ಕಾರ್ಯಕ್ರಮ ತಿತಿತಿ.ಜಿಚಿಛಿebooಞ.ಛಿom/ಃeಟಿgಚಿಟuಡಿu.hssಜಿ ನಲ್ಲಿ ನೇರಪ್ರಸಾರಗೊಳ್ಳಲಿದೆ ಎಂದು ತಿಳಿಸಿರುವ ಅವರು, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಪ್ರಕೃತಿ ವಂದನೆ ಸಲ್ಲಿಸುವಂತೆ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗಣಪತಿ ಹೆಗಡೆ 94489 87819, ಅರುಣ್ ಕುಮಾರ್ 9448464461 ಸಂಪರ್ಕಿಸಬಹುದು.