ಬಡತನ ನಿರ್ಮೂಲನೆ ಸುಲಭದ ಮಾತಲ್ಲ -ಎ.ಎಸ್. ಪೊನ್ನಣ್ಣ : ಗೋಣಿಕೊಪ್ಪಲಿನಲ್ಲಿ 400 ಫಲಾನುಭವಿಗಳಿಗೆ ದಿನಸಿ ಕಿಟ್ ವಿತರಣೆ

30/08/2020

ಪೊನ್ನಂಪೇಟೆ, ಆ30: ದೇಶದಲ್ಲಿ ಹಿಂದಿನಿಂದಲೂ ಕಾಡುತ್ತಿರುವ ಬಡತನವನ್ನು ನಿರ್ಮೂಲನೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇದೀಗ ತಮ್ಮ ಪೋಷಕರ ಸ್ಮರಣಾರ್ಥ ರಚನೆಯಾಗಿರುವ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ದಿನಸಿ ಕಿಟ್  ಗಳ ವಿತರಣೆ ಬಡವರಿಗೆ ಕಿಂಚಿತ್ತಾದರೂ ಸಹಾಯವಾಗಲಿ ಎಂಬ ಸದುದ್ದೇಶದಿಂದಲೇ ಹೊರತು ಬಡತನವನ್ನು ನಿರ್ಮೂಲನೆ ಮಾಡುವ ಭ್ರಮೆಯಿಂದಲ್ಲ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರು ಆಗಿರುವ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಅವರು ಹೇಳಿದರು. 
‘ದಿ.ಎ.ಕೆ.ಸುಬ್ಬಯ್ಯನವರ ಮೊದಲ ವರ್ಷದ ಪುಣ್ಯಸ್ಮರಣೆ’ಯ ಅಂಗವಾಗಿ ಎ.ಕೆ.ಸುಬ್ಬಯ್ಯ-ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಗೋಣಿಕೊಪ್ಪಲಿನ ಸ್ವಾತಂತ್ರ ಹೋರಾಟಗಾರರ ಸ್ಮಾರಕ ಭವನದ ಸಭಾಂಗಣದಲ್ಲಿ ಭಾನುವಾರದಂದು ನಡೆದ 4ನೇ ದಿನದ ದಿನಸಿ ಕಿಟ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ಟ್ರಸ್ಟ್ ವತಿಯಿಂದ ಅರ್ಹ 4500 ಫಲಾನುಭವಿಗಳಿಗೆ ದಿನಸಿ ಕಿಟ್ ಗಳನ್ನು ನಿಸ್ವಾರ್ಥವಾಗಿ ವಿತರಿಸಲಾಗಿದೆ. ಇದೇನು ಮಹಾ ಸಾಧನೆಯೇನಲ್ಲ. ಇದರಿಂದ ಬಡತನ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಯಾವುದೇ ಭ್ರಮೆ ತಮಗಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ,  ಬಡತನ ನಿರ್ಮೂಲನೆಯ ಹೊಣೆ ಮುಖ್ಯವಾಗಿ ಸರಕಾರದ್ದು ಎಂದು ಒತ್ತಿ ಹೇಳಿದರು. 
ಜನತೆ ಸಂಕಷ್ಟ ಅನುಭವಿಸುವ ಕಾಲಘಟ್ಟದಲ್ಲಿ ಬಡತನದ ನೋವನ್ನು ಅರ್ಥೈಸಿಕೊಂಡು ಅವರಿಗೆ ಸಹಾಯ ಮಾಡಬೇಕೆಂದು ತನ್ನ ಸ್ವಂತ ದುಡಿಮೆಯ ಹಣದಲ್ಲಿ ಸೀಮಿತ ಇತಿಮಿತಿಯೊಳಗೆ ದಿನಸಿ ಕಿಟ್  ವಿತರಿಸಲಾಗಿದೆ. ಇದರ ಹಿಂದೆ  ಯಾವುದೇ ‘ದೊಡ್ಡಸ್ತಿಕೆ’ ಪ್ರದರ್ಶನದ ಉದ್ದೇಶವಿಲ್ಲ. ಅದರ ಅಗತ್ಯವೂ ನಮಗಿಲ್ಲ. ಕಿಟ್ ವಿತರಣೆಗಾಗಿ ತಮ್ಮ ಸ್ವಂತ ಹಣವಲ್ಲದೆ ಹೊರಗಿನಿಂದ ಯಾವುದೇ ಅನುದಾನ ಪಡೆದಿಲ್ಲ. ಹೀಗೆ ಸ್ವಾರ್ಥ ರಹಿತವಾಗಿ ಬಡವರಿಗಾಗಿ ನಡೆಸುವ ಕಾರ್ಯಕ್ರಮಗಳನ್ನು  ಸ್ವಾಗತಿಸುವ ಬದಲು ಈ ಕುರಿತು ಅನಗತ್ಯ ಟೀಕೆ ಸಲ್ಲದು ಎಂದು  ಹೇಳಿದ ಎ.ಎಸ್. ಪೊನ್ನಣ್ಣ ಅವರು, ಕಿಟ್  ವಿತರಣೆಯಿಂದ ಯಾವುದೇ ವೈಯುಕ್ತಿಕ ಲಾಭ ಮತ್ತು ಪ್ರಚಾರದ ಉದ್ದೇಶವಿಲ್ಲ. ಬಡವರ ಕಷ್ಟಕ್ಕೆ ಅಲ್ಪ ಪ್ರಮಾಣದಲ್ಲಾದರೂ ನೆರವಾಗುವುದೇ ಇದರ ಮೂಲ ಉದ್ದೇಶ. ಇದರ ಪ್ರತಿಫಲವಾಗಿ ಜನರ ಆಶೀರ್ವಾದವಲ್ಲದೆ ಬೇರೇನೂ ನಿರೀಕ್ಷಿಸುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. 
ಈಗಾಗಲೇ 4500 ಫಲಾನುಭವಿಗಳನ್ನು ಗುರುತಿಸಿ ಕಿಟ್ ವಿತರಿಸಲಾಗಿದೆ. ಹಾಗೆಂದು ಜಿಲ್ಲೆಯ ಎಲ್ಲರಿಗೂ ಕಿಟ್ ನೀಡುವಷ್ಟು ಶಕ್ತಿ ತಮಗಿಲ್ಲ. 4500 ಫಲಾನುಭವಿಗಳನ್ನು ಗುರುತಿಸುವುದು ಸುಲಭದ ಕೆಲಸವಲ್ಲ. ಇದನ್ನು ಸಮರ್ಥವಾಗಿ ನಿಭಾಯಿಸಿದ  ಕಾಂಗ್ರೆಸ್ ಮುಖಂಡರು ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರ ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ,  ಈಗಾಗಲೇ ಟ್ರಸ್ಟ್ ವತಿಯಿಂದ ಉತ್ತರ ಭಾರತದ 350ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಅವರ ಊರಿಗೆ ಮರಳಲು ಉಚಿತವಾಗಿ ರೈಲ್ವೆ ಟಿಕೆಟ್ ಅನ್ನು ನೀಡಲಾಗಿದೆ. ಕೊರೋನಾ ಸಂಕಷ್ಟದ ಕಾಲದಲ್ಲಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ಈಶಾನ್ಯ ಮತ್ತು ಉತ್ತರ ಭಾರತದ ವಿದ್ಯಾರ್ಥಿಗಳಿಗೂ ಲಕ್ಷಾಂತರ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ. ಇದರಲ್ಲಿ ‘ರಾಜಕೀಯ ಲಾಭ ಲೆಕ್ಕಾಚಾರ’ ಹಾಕುವುದು ನ್ಯಾಯೋಚಿತವೇ ಎಂದು ಪೊನ್ನಣ್ಣ ಅವರು ಮಾರ್ಮಿಕವಾಗಿ ಪ್ರಶ್ನಿಸಿದರು. 
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಚೆಪ್ಪುಡಿರ ಎಸ್.ಅರುಣ್ ಮಾಚಯ್ಯ ಅವರು ಮಾತನಾಡಿ,  ಕೇವಲ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ‘ಫೋಸ್’ ನೀಡುವ ನಾಯಕರು ಹೆಚ್ಚುತ್ತಿರುವ ಇಂದಿನ ಸಮಾಜದಲ್ಲಿ, ಬಡತನ ಮತ್ತು ಬಡವರ ಪರ ಕಾಳಜಿ ಹೊಂದಿ ನಿಸ್ವಾರ್ಥದಿಂದ ಅವರಿಗೆ ಸಹಾಯ ಮಾಡುತ್ತಿರುವ ಪೊನ್ನಣ್ಣ ಅವರು ಇಂದು ಕೊಡಗಿನಲ್ಲಿ ವಿಭಿನ್ನವಾಗಿ ಗುರುತಿಸಲ್ಪಟ್ಟಿದ್ದಾರೆ. ಅವರ ನಿಸ್ವಾರ್ಥ ಸೇವೆಯಲ್ಲೂ ‘ಸ್ವಾರ್ಥ’ವನ್ನು ಲೇಪಿಸಿ ಮಾತನಾಡುವುದು ಯಾರಿಗೂ ಶೋಭೆಯಲ್ಲ. ಕಳೆದ 13 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕರು ಬಡವರಿಗಾಗಿ ಏನು ಮಾಡಿದರೆ ಎಂಬುದನ್ನು ಸಾರ್ವಜನಿಕರಿಗೆ ಹೇಳಲಿ. ಗೋಣಿಕೊಪ್ಪಲಿನಲ್ಲಿದ್ದ ಬಸ್ ನಿಲ್ದಾಣವನ್ನು ಕೆಡವಿ ಹಾಕಿ ಹಲವು ವರ್ಷಗಳೇ ಕಳೆದಿದೆ. ಇಂದಿಗೂ ಗೋಣಿಕೊಪ್ಪಲಿನಂತಹ ವಾಣಿಜ್ಯ ಪಟ್ಟಣದಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸುವಲ್ಲಿ ಕ್ಷೇತ್ರದ ಶಾಸಕರು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಹಿಂದೆ ಹತ್ತು ವರ್ಷಗಳ ಕಾಲ ದೇಶವನ್ನು ಆಳಿದ ಯುಪಿಎ ಸರಕಾರ ಬಹಳಷ್ಟು ಜನಪರ ಯೋಜನೆಗಳನ್ನು ವಿಶೇಷವಾಗಿ ಬಡವರನ್ನು ಗುರಿಯಾಗಿಸಿಕೊಂಡು ಜಾರಿಗೊಳಿಸಿತು. ದೇಶದ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಆಹಾರ ಭದ್ರತಾ ಕಾಯ್ದೆ, ಬಡವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, ದುಡಿಯುವ ವರ್ಗ ಕೆಲಸವಿಲ್ಲದೆ ಪರಿತಪಿಸಬಾರದು ಎಂಬ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆ ಮೊದಲಾದ ಬಡವರ ಪರ ಯೋಜನೆಗಳನ್ನು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ  ಜಾರಿಗೆ ತಂದಿತ್ತು. ಇದೀಗ ಕೇಂದ್ರ ಸರ್ಕಾರ ಅದೇ ಯೋಜನೆಗಳ ಹೆಸರು ಬದಲಿಸಿ ಯೋಜನೆಗಳನ್ನು ಬುಡಮೇಲು ಮಾಡಿದೆ. ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಜಾರಿಗೆ ತಂದ ಹಲವು ಯೋಜನೆಗಳನ್ನು ಕೂಡ ಈಗಿನ ಬಿಜೆಪಿ ಸರಕಾರ ಹೆಸರು ಬದಲಿಸಿ ಅದರ ಮಹತ್ವವನ್ನು ನಾಶಗೊಳಿಸಿದೆ ಅಲ್ಲದೆ, ಅದರ ಪ್ರಯೋಜನವನ್ನು ಬಡವರಿಗೆ ದೊರೆಯದಂತೆ ಮಾಡಿದ್ದಾರೆ ಎಂದು ಕಿಡಿಕಾರಿದ ಅರುಣ್ ಮಾಚಯ್ಯ ಅವರು, ಇದೀಗ ಕೊಡಗಿನಲ್ಲಿ ಶಾಸಕರು ಮಾಡಬೇಕಾದ ಕೆಲಸಗಳನ್ನು ಜಿಲ್ಲೆಯ ಕೆಲ ಸಂಘಟನೆಗಳು ಮಾಡುತ್ತಿದೆ. ರೈತ ಸಂಘ,  ಬೆಳೆಗಾರರ ಒಕ್ಕೂಟ ಮೊದಲಾದ ಸಂಘಟನೆಗಳು ಅಧಿಕಾರಿಗಳ ಕಣ್ಣು ತೆರೆಸುವ ಕೆಲಸವನ್ನು ಮಾಡುತ್ತಿದ್ದು, ಇದರ ಬಗ್ಗೆ  ಶಾಸಕರು ನಾಚಿಕೆಪಟ್ಟುಕೊಳ್ಳಬೇಕು ಎಂದು ಹೇಳಿದರು. 
ಸಮಾರಂಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ತೀತಿರ ಧರ್ಮಜ ಉತ್ತಪ್ಪ ಅವರು ಮಾತನಾಡಿದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎ.ಕೆ.ಸುಬ್ಬಯ್ಯ ಅವರ ಹಿರಿಯ ಪುತ್ರ ನರೇನ್ ಕಾರ್ಯಪ್ಪ, ಕಾಂಗ್ರೆಸ್ ಮುಖಂಡರಾದ ಕೊಲ್ಲಿರ ಬೋಪಣ್ಣ, ನರೇಂದ್ರ ಕಾಮತ್, ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಗೋಣಿಕೊಪ್ಪಲು ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಹಾಲಿ ಅಧ್ಯಕ್ಷರಾದ ಕುಲ್ಲಚಂಡ ಗಣಪತಿ, ಚೆಪ್ಪುಡೀರ  ಧ್ಯಾನ್ ಸುಬ್ಬಯ್ಯ, ಕಾಂಗ್ರೆಸ್ ಪ್ರಮುಖರಾದ ಕಡೇಮಾಡ ಕುಸುಮ ಜೋಯಪ್ಪ, ಟಾಟು ಮೊಣ್ಣಪ್ಪ, ಮುಕ್ಕಾಟೀರ ಸಂದೀಪ್, ಆಲೀರ ಸಾದಲಿ, ಪಿ.ಜಿ.ರಾಜಶೇಖರ್, ನಾಮೇರ  ಅಂಕಿತ್ ಪೊನ್ನಪ್ಪ, ಜಮ್ಮಡ ಸೋಮಣ್ಣ, ಎಂ.ಎ.ಸಮೀರ್, ಖಾಲಿದ್ ಮೊದಲಾದವರು ಹಾಜರಿದ್ದರು. 
ಬಿ.ಎನ್.ಪ್ರಕಾಶ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎ.ಜೆ. ಬಾಬು ಅವರು ವಂದಿಸಿದರು. ಗೋಣಿಕೊಪ್ಪಲಿನಲ್ಲಿ 400 ಫಲಾನುಭವಿಗಳಿಗೆ ಟ್ರಸ್ಟ್ ವತಿಯಿಂದ ದಿನಸಿ ಕಿಟ್  ಗಳನ್ನು ವಿತರಿಸಲಾಯಿತು.