ಪರ್ಯಾಯ ರಸ್ತೆಯನ್ನು ಮೊದಲು ದುರಸ್ತಿ ಪಡಿಸಿ : ಜೆಡಿಎಸ್ ಒತ್ತಾಯ

01/09/2020

ಮಡಿಕೇರಿ ಆ.31 : ರಸ್ತೆ ದುರಸ್ತಿಯ ಕಾರಣ ನೀಡಿ ಮಡಿಕೇರಿ- ಮೇಕೇರಿ ಮೂಲಕ ವಾಹನಗಳ ಸಂಚಾರವನ್ನು ನಿಷೇಧಿಸಿರುವ ಜಿಲ್ಲಾಡಳಿತ ಪರ್ಯಾಯವಾಗಿ ಮಡಿಕೇರಿ, ತಾಳತ್ತಮನೆ- ಮೇಕೇರಿ ಮಾರ್ಗವನ್ನು ಸೂಚಿಸಿದ್ದು, ಈ ಮಾರ್ಗದ ದುರಸ್ತಿ ಕಾರ್ಯ ಮೊದಲು ಆಗಬೇಕಾಗಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಪರ್ಯಾಯ ಮಾರ್ಗ ಅತ್ಯಂತ ಕಿರಿದಾಗಿದ್ದು, ಸಂಪೂರ್ಣ ಹೊಂಡ, ಗುಂಡಿಗಳಿಂದ ಕೂಡಿದೆ. ಇದೀಗ ಹೆಚ್ಚಿನ ಸಂಖ್ಯೆಯ ವಾಹನಗಳ ಸಂಚಾರದಿಂದ ಮತ್ತಷ್ಟು ರಸ್ತೆ ಹದಗೆಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮಡಿಕೇರಿ, ತಾಳತ್ತಮನೆ- ಮೇಕೇರಿ ರಸ್ತೆ ಅತ್ಯಂತ ಚಿಕ್ಕದಾಗಿದ್ದು, ಹೊರ ರಾಜ್ಯಗಳ ಭಾರೀ ವಾಹನಗಳು ಕೂಡ ಇದೇ ಮಾರ್ಗವಾಗಿ ಸಂಚರಿಸಬೇಕಾಗಿದ್ದು, ಅನಾಹುತಗಳು ಸಂಭವಿಸುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಮಡಿಕೇರಿ- ಮೇಕೇರಿ ರಸ್ತೆ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಬೆಂಬಲವಿದೆ, ಆದರೆ ಈ ಕಾಮಗಾರಿಗೂ ಮೊದಲು ಪರ್ಯಾಯ ರಸ್ತೆಯ ದುರಸ್ತಿ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ ಎಂದು ತಿಳಿಸಿದ್ದಾರೆ.
::: ಮಡಿಕೇರಿ ರಸ್ತೆ ಅಭಿವೃದ್ಧಿಯಾಗಲಿ :::
ಮಡಿಕೇರಿ ನಗರಸಭೆಗೆ ಇದೇ ಮೊದಲ ಬಾರಿಗೆ ಯುವ ಪೌರಾಯುಕ್ತರೊಬ್ಬರು ನಿಯೋಜನೆಗೊಂಡಿದ್ದು, ಇವರಿಂದ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಬಹುದಾಗಿದೆ ಎಂದು ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಬಿಸಿಲಿನ ವಾತಾವರಣವಿರುವುದರಿಂದ ತಕ್ಷಣ ಡಾಂಬರೀಕರಣ ಕಾರ್ಯವನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.