ಅಮ್ಮ ಕೊಡವರಿಗೆ ಕೊಡಗು ರಕ್ಷಣಾ ವೇದಿಕೆ ಬೆಂಬಲ

05/09/2020

ಮಡಿಕೇರಿ ಸೆ. 5 : ಪ್ರವಾಸಿಗರು ತಲಕಾವೇರಿ ಕ್ಷೇತ್ರವನ್ನು ಅಪವಿತ್ರಗೊಳಿಸುತ್ತಿರುವುದರಿಂದ ದುರ್ಘಟನೆಗಳು ಸಂಭವಿಸುತ್ತಿದ್ದು, ಪ್ರವಾಸೋದ್ಯಮ ಇಲಾಖೆ ಕೊಡಗಿನ ಇತಿಹಾಸ ಪ್ರಸಿದ್ಧ ದೇವಾಲಯಗಳನ್ನು ಪ್ರವಾಸಿತಾಣಗಳು ಎಂದು ಪ್ರತಿಬಿಂಬಿಸುವುದನ್ನು ಮೊದಲು ನಿಲ್ಲಿಸಲಿ ಎಂದು ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ದತ್ತಿ ಇಲಾಖೆ ಗುರುವಾಯುರು ದೇವಾಲಯದ ಮಾದರಿಯಲ್ಲಿ ತಲಕಾವೇರಿ ಹಾಗೂ ಭಾಗಮಂಡಲ ದೇವಾಲಯಗಳಲ್ಲಿ ಶಿಸ್ತಿನ ನಿಯಮಗಳನ್ನು ಜಾರಿಗೆ ತರಲಿ ಎಂದು ಸಲಹೆ ನೀಡಿದರು.
ಮುನ್ನೂರು ವರ್ಷಗಳಿಂದ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಕಾರಣವನ್ನು ನೀಡಿ ವಂಶ ಪಾರಂಪರ್ಯ ಹಕ್ಕು ಎಂದು ಪ್ರತಿಪಾದಿಸುವುದು ತಪ್ಪು. ಹಿಂದಿನ ಸಂಪ್ರದಾಯದಂತೆ ಅಮ್ಮ ಕೊಡವರೇ ಪೂಜೆಯನ್ನು ಮಾಡಲಿ ಎಂದು ತಿಳಿಸಿದ ಪವನ್ ಪೆಮ್ಮಯ್ಯ, ಈ ಹಕ್ಕಿನ ಪರ ಹೋರಾಟಕ್ಕೆ ವೇದಿಕೆಯ ಬೆಂಬಲವಿದೆ ಎಂದು ತಿಳಿಸಿದರು.