ಗಾಂಜಾ ದಂಧೆಯಲ್ಲಿ ತೊಡಗಿದ್ದ ಐವರ ಬಂಧನ : ವಿರಾಜಪೇಟೆ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಮಡಿಕೇರಿ ಸೆ.8 : ಗಾಂಜಾ ದಂಧೆಯಲ್ಲಿ ತೊಡಗಿದ್ದ ಐದು ಮಂದಿಯನ್ನು ಬಂಧಿಸಿರುವ ವೀರಾಜಪೇಟೆ ಪೊಲೀಸರು 3.360ಕೆ.ಜಿ ಗಾಂಜಾ ಹಾಗೂ 5 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ರಾಜೀವ್ ನಗರದ ಆಟೋ ಚಾಲಕ ಎಂ.ಬಿ.ಮುದಾಶೀರ್ (35) ಹಾಗೂ ವೆಲ್ಡಿಂಗ್ ಕೆಲಸಗಾರ ಎಸ್.ಎಕ್ಸ್.ಮಹ್ಮದ್ ಫರೂಕ್ (34), ವೀರಾಜಪೇಟೆ ದೇವಣಗೇರಿಯ ಪಿ.ಎಸ್.ರಫೀಕ್ (42), ವೀರಾಜಪೇಟೆ ಮೊಗರಗಲ್ಲಿಯ ಆರ್.ಮನು(24) ಮತ್ತು ವೀರಾಜಪೇಟೆ ಅರಸುನಗರದ ಎ.ಎಸ್.ಮಹೇಶ್(23) ಬಂಧಿತರು.
ಸಿದ್ದಾಪುರ ಕಡೆಯಿಂದ ವೀರಾಜಪೇಟೆಗೆ ಬರುತ್ತಿದ್ದ ಕೆ.ಎ.36 ಎಂ,0733 ರ ಮಾರುತಿ ಕಾರಿನಲ್ಲಿ ಗಾಂಜಾವನ್ನು ಸಾಗಿಸುತ್ತಿರುವ ಸುಳಿವು ದೊರೆತ ನಗರ ಠಾಣೆ ಪೊಲೀಸರು ಡಿ.ವೈ.ಎಸ್.ಪಿ ಜಯಕುಮಾರ್ ಅವರ ನೇತೃತ್ವದಲ್ಲಿ ಮೊದಲೇ ತಯಾರಿ ನಡೆಸಿ, ಇಲ್ಲಿನ ದಂತ ವೈದ್ಯಕೀಯ ಕಾಲೇಜು ರಸ್ತೆ ಬಳಿ ಕಾದು ಕುಳಿತಿದ್ದರು.
ಕಾರು ಬರುತ್ತಿದ್ದ ಸಂದರ್ಭ ತಡೆದು ಪರಿಶೀಲನೆ ನಡೆಸಿದಾಗ ಗಾಂಜಾ ಇರುವುದು ಪತ್ತೆಯಾಗಿದ್ದು, ಕಾರಿನಲ್ಲಿದ್ದ ಐದು ಮಂದಿ ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಠಾಣಾಧಿಕಾರಿ ಎಸ್.ಹಚ್.ಬೋಜಪ್ಪ, ಸಿಬ್ಬಂದಿಗಳಾದ ಸುನೀಲ್, ಗಿರೀಶ್, ಸಂತೋಷ್, ರಜನ್, ಸತೀಶ್, ಲೊಕೇಶ್, ಆನಂದ್, ಮುನೀರ್, ಯೊಗೇಶ್ ಅವರುಗಳು ಭಾಗವಹಿಸಿದ್ದರು.