ಕೂಗೂರು ಗ್ರಾಮಸ್ಥರಿಗೆ ಕಂಟಕವಾಗಿದ್ದ ಗೂಳಿ ಸೆರೆ

08/09/2020

ಸೋಮವಾರಪೇಟೆ ಸೆ.8 : ವಾರಸುದಾರರಿಲ್ಲದೆ ಸೋಮವಾರಪೇಟೆಯ ಕೂಗೂರು ಗ್ರಾಮಸ್ಥರಿಗೆ ಕಂಟಕವಾಗಿದ್ದ ಗೂಳಿಯೊಂದನ್ನು ಸೆರೆ ಹಿಡಿದು ಗೋಶಾಲೆಗೆ ಸ್ಥಳಾಂತರಗೊಳಿಸಲಾಗಿದೆ. ಕೃಷಿ ಫಸಲನ್ನು ನಷ್ಟಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಗೂಳಿಯನ್ನು ಹಿಡಿದು ಮೈಸೂರಿನ ಗೋಶಾಲೆಗೆ ಕಳುಹಿಸಿದರು.
ಗೌಡಳ್ಳಿ ಗ್ರಾಮ ಪಂಚಾಯಿತಿಯ ಕೂಗೂರು, ಗೌಡಳ್ಳಿ, ಬೀಟಿಕಟ್ಟೆ, ಕೋಟೆಯೂರು, ಹೆಗ್ಗಳ ಗ್ರಾಮಗಳಲ್ಲಿ ಕೆಲ ವರ್ಷಗಳಿಂದ ಸುತ್ತಾಡಿಕೊಂಡಿದ್ದ ಗೂಳಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಬೆಳೆಯನ್ನು ತಿಂದು ಹಾನಿಪಡಿಸುತ್ತ, ಸಾರ್ವಜನಿಕರ ಮೇಲೂ ಧಾಳಿಗೆ ಮುಂದಾಗುತ್ತಿತ್ತು ಎನ್ನಲಾಗಿದೆ.
ಗ್ರಾಮಸ್ಥರು ಹಾಗು ಕರವೇ ತಾಲೂಕು ಘಟಕದ ಅಧ್ಯಕ್ಷರಾದ ಫ್ರಾನ್ಸೀಸ್ ಡಿಸೋಜ ಅವರುಗಳು ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡ ಮೇರೆಗೆ, ಪಿಡಿಒ ಲಿಖಿತ ಸಾಗಿಸಲು ಅನುಮತಿ ಪತ್ರ ನೀಡಿದ್ದಾರೆ. ನಂತರ ಕೂಗೂರು ಗ್ರಾಮಸ್ಥರ ಸಹಕಾರದಿಂದ ಗೂಳಿಯನ್ನು ಹಿಡಿದು ವಾಹನದ ಮೂಲಕ ಮೈಸೂರಿನ ಗೋಶಾಲೆಗೆ ಸಾಗಿಸಲಾಯಿತು. ಗೂಳಿಯನ್ನು ಹಿಡಿಯಲು ಕೂಗೂರು ಗ್ರಾಮಸ್ಥರಾದ ಸುಮಂತ್, ಲೋಕೇಶ್, ದಯಾನಂದ, ಚಂದ್ರಶೇಖರ್, ಸಿಂಚನ್,ಶಿವಕುಮಾರ್, ಕರುಣ್, ಹೂವಯ್ಯ, ಅರ್ಜುನ್, ಸಂದೀಪ್, ಅಶ್ವಥ್, ಮಿಲನ್ ಸಹಕರಿಸಿದರು.